ಬೆಳಗಾವಿ:ಉಪಚುನಾವಣೆ ಮೂರು ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಕಾಂಗ್ರೆಸ್ ಸರಕಾರದ ಅಭಿವೃದ್ಧಿ, ಗ್ಯಾರಂಟಿ ಯೋಜನೆಗಳು ಯಶಸ್ವಿಯಾಗಿವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಚುನಾವಣೆಯಲ್ಲಿ ಕಾರ್ಯಕರ್ತರ ಶ್ರಮವಿದೆ. ನಮಗೆ ಚನ್ನಪಟ್ಟಣ, ಶಿಗ್ಗಾವಿ ಕ್ಷೇತ್ರದ ಗೆಲುವು ಪ್ಲಸ್ ಆಗಿದೆ. ಶಿಗ್ಗಾವಿಯಲ್ಲಿ ಹಿಂದು ಮುಸ್ಲಿಂ ಎಂಬ ಭಾವನೆ ದೂರ ಮಾಡಿದ್ದೇವೆ. ಅಹಿಂದ ಮತ ಚದುರದಂತೆ ನೋಡಿಕೊಂಡೆವು. ವಕ್ಪ್ ವಿವಾದ ಸೃಷ್ಟಿ ಮಾಡಲು ಅವಕಾಶ ನೀಡಲಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಸಾಧ್ಯವಾಯಿತು ಎಂದು ಸತೀಶ್ ಜಾರಕಿಹೊಳಿ ಹೇಳಿದರು.
ಆರಂಭದಲ್ಲಿ ಸಂಡೂರು ಮಾತ್ರ ಗೆಲ್ಲುತ್ತೇವೆ ಎಂದುಕೊಂಡಿದ್ದೆವು. ಆದರೆ ಎಲ್ಲ ಕ್ಷೇತ್ರದಲ್ಲಿ ಅಹಿಂದ ಮತಗಳು ಒಂದಾಗಿವೆ. ಇಲ್ಲಿಯವರೆಗೆ ಬೊಮ್ಮಾಯಿವರಿಗೆ ಅಹಿಂದ ಮತಗಳು ಶೇ. 70 ರಷ್ಟು ಬರುತ್ತಿದ್ದವು. ಅದನ್ನು ನಾವು ಈ ಬಾರಿ ಬದಲಾವಣೆ ಮಾಡಿದ್ದೇವೆ. ಗೆಲ್ಲುವ ವಿಶ್ವಾಸ ಇತ್ತು. ಪ್ರತಿ ಚುನಾವಣೆಯನ್ನು ನಮ್ಮ ಚುನಾವಣೆ ಎಂದು ಕೆಲಸ ಮಾಡಬೇಕು. ಅದನ್ನು ನಾವು ಮಾಡಿದ್ದೇವೆ. ಶಿಗ್ಗಾವಿ ಗೆಲುವು ಮುಸ್ಲಿಂ ಸಮುದಾಯದಕ್ಕೆ ಒಳ್ಳೆಯ ಸಂದೇಶವಾಗಿದೆ. ವಕ್ಫ್ದಲ್ಲಿ ಹಾವೇರಿಯ 250 ಕೇಸ್ ಗಳು ಇವೆ. ಅದರೂ ಜನರು ನಮ್ಮನ್ನು ಬೆಂಬಲಿಸಿದ್ದಾರೆ ಎಂದರು.
ಶಿಗ್ಗಾವಿ ಗೆಲುವು ಸತೀಶ್ ಜಾರಕಿಹೊಳಿಗೆ ಪ್ಲಸ್ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಇಡೀ ರಾಜ್ಯ ಕೂಡ ಇದನ್ನ ನೋಡ್ತಾಯಿತ್ತು. ಮಾಜಿ ಮುಖ್ಯಮಂತ್ರಿ ಪ್ರಬಲ ರಾಜಕಾರಣಿ ವಿರುದ್ಧ ಚುನಾವಣೆ ಹೇಗೆ ಮಾಡ್ತಾರೆ ಅಂತಿತ್ತು. ಕೆಲವು ತಂತ್ರಗಾರಿಕೆ, ನಾವು ಹೇಗೆ ಚುನಾವಣೆ ಮಾಡುತ್ತೇವೆ ಅದೇ ಮಾದರಿಯಲ್ಲಿ ಚುನಾವಣೆ ಮಾಡಿದ್ವಿ. ಈ ರೀತಿ ಚುನಾವಣೆಯನ್ನ ಮಾಡಿದರೆ ರಾಜ್ಯದಲ್ಲಿ ಗೆಲ್ಲುತ್ತೇವೆ. ಮುಸ್ಲಿಮರಿಗೆ ಚುನಾವಣೆಯಲ್ಲಿ ನಿಲ್ಲಿಸುತ್ತಾರೆ ಹೋಗ್ತಾರೆ ಅಂತ ಇತ್ತು. ಈ ಸಾರಿ ಚುನಾವಣೆಯಲ್ಲಿ ಒಂದು ಸಂದೇಶ ಹೋಗಿದೆ. ಮುಸ್ಲಿಮರಿಗೆ ಟಿಕೆಟ್ ಕೊಟ್ಟರೆ ಗೆಲ್ಲುತ್ತಾರೆ ಅಂತ ಹೋಗಿದೆ. ಶಿಗ್ಗಾವಿ ಗೆಲುವು ನಮಗೆ ಡಬಲ್ ಪ್ರಮೋಷನ್ ಆಗಿದೆ. ಡಿಸಿಎಂ ಸ್ಥಾನ ಇಲ್ಲದೇ ನಾವು ಇಲ್ಲಿ ಗೆಲ್ಲಿಸಿದ್ದೇವೆ ಎಂದರು.