ಮದ್ದೂರು: ನಟಿ ಕ್ವೀನ್ ರಚಿತಾ ರಾಮ್ ವಿರುದ್ಧ ಮದ್ದೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಸಂವಿಧಾನಕ್ಕೆ ಮತ್ತು ಗಣರಾಜ್ಯೋತ್ಸವ ದಿನಕ್ಕೆ ನಟಿ ರಚಿತರಾಮ್ ಅಪಮಾನ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸಿ. ಶಿವಲಿಂಗಯ್ಯ ದೂರು ದಾಖಲಿಸಿದ್ದಾರೆ.
ಇತ್ತೀಚೆಗೆ ನಡೆದ ಕ್ರಾಂತಿ ಸಿನಿಮಾದ ಬೃಹತ್ ಬಹಿರಂಗ ಕಾರ್ಯಕ್ರಮದಲ್ಲಿ ರಚಿತಾ ರಾಮ್ ಅವರು, ಪ್ರತಿ ವರ್ಷ ಜನವರಿ 26ಕ್ಕೆ ಗಣರಾಜ್ಯೋತ್ಸವ ಆಚರಿಸುತ್ತಿದ್ದೀರಿ, ಆದರೆ ಈ ಬಾರಿ ಗಣರಾಜ್ಯೋತ್ಸವ ಮರೆತು ಕ್ರಾಂತಿಯೋತ್ಸವ ಮಾಡಿ ಎಂದಿದ್ದಾರೆ. ಇದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಸಂವಿಧಾನ ಜಾರಿಯಾದ ದಿನಕ್ಕೆ ಮಾಡಿದ ಅಪಮಾನ ಎಂದು ಸುದ್ದಿಗೋಷ್ಠಿಯಲ್ಲಿ ಶಿವಲಿಂಗಯ್ಯ ಆರೋಪಿಸಿದರು.
ರಚಿತಾರಾಮ್ ಅವರ ಮೇಲೆ ದೇಶ ದ್ರೋಹ ಪ್ರಕರಣ ದಾಖಲಿಸಿ ಗಡಿಪಾರು ಮಾಡಬೇಕೆಂದು ಒತ್ತಾಯಿಸಿದರು. ರಚಿತಾ ರಾಮ್ ವಿರುದ್ಧ ಮದ್ದೂರು ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.