ಬೆಂಗಳೂರು: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಮತ್ತೆ ತಾರಕಕ್ಕೇರಿದೆ. ಸ್ವಾತಂತ್ರ್ಯ ನಂತರ ಶುರುವಾದ ಬೆಳಗಾವಿ ಮಹಾರಾಷ್ಟ್ರ ಗಡಿ ವಿವಾದ ಸಂಬಂಧ ಇಂದು ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ನಡೆಯಲಿದೆ.
ಈ ಹಿನ್ನೆಲೆ ವಿಪಕ್ಷನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪತ್ರ ಬರೆದಿದ್ದು ಸುಪ್ರೀಂ ಕೋರ್ಟ್ ವಿಚಾರಣೆಯ ಬಳಿಕ ಶೀಘ್ರ ಸಭೆ ನಿಗದಿಗೆ ಚಿಂತಿಸಿದ್ದಾರೆ.
ಬೊಮ್ಮಾಯಿ ವಿಧಾನಸಭೆಯ ವಿಪಕ್ಷ ನಾಯಕರಾದ ಸಿದ್ದರಾಮಯ್ಯ ಹಾಗೂ ಪರಿಷತ್ ವಿಪಕ್ಷನಾಯಕ ಹರಿಪ್ರಸಾದ್‌ಗೆ ಬರೆದ ಪತ್ರದಲ್ಲಿ ಸರ್ಕಾರ ತೆಗೆದುಕೊಂಡ ನಿಲುವು, ವಕೀಲರ ತಂಡ ರಚನೆ ಹಾಗೂ ಕೈಗೊಂಡ ಕ್ರಮ ಕುರಿತು ಪತ್ರದ ಮೂಲಕ ಲಿಖಿತ ಮಾಹಿತಿ ನೀಡಿದ್ದಾರೆ.
ಸತತ 18 ವರ್ಷಗಳ ಬಳಿಕ ಮತ್ತೆ ಕಾನೂನು ಸಮರ ಶುರುವಾಗಿದೆ. 1956ರಿಂದಲೂ ಮಹಾರಾಷ್ಟ್ರ ಸರ್ಕಾರ ನಾಡದ್ರೋಹಿ ಎಂಇಎಸ್ಗೆ ಪ್ರಚೋದನೆ ನೀಡುತ್ತಲೇ ಬಂದಿದೆ. ಬೆಳಗಾವಿ ಸೇರಿ ಕರ್ನಾಟಕದ 4 ಜಿಲ್ಲೆಯ 865 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂದು 2004ರಲ್ಲಿ ಮಹಾರಾಷ್ಟ್ರ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಈ ಪ್ರಕರಣದ ಅಂತಿಮ ವಿಚಾರಣೆ ಇಂದು ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಕರ್ನಾಟಕ ಹಾಗೂ ಮಹಾರಾಷ್ಟ್ರ ಎರಡೂ ಸರ್ಕಾರಗಳ ವಾದ ಪ್ರತಿವಾದವನ್ನು ಇಂದು ಸುಪ್ರೀಂಕೋರ್ಟ್ ಆಲಿಸಲಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಅಧಿಕಾರಕ್ಕೆ ಬರುತ್ತಿದ್ದಂತೆ ಬೆಳಗಾವಿ ಗಡಿ ಕ್ಯಾತೆ ಕೆಣಕಿದ್ರು. ಕಾನೂನು ಹೋರಾಟದ ಸುಳಿವು ನೀಡಿದ್ದರು. ಇದೀಗ ಮಹಾರಾಷ್ಟ್ರ ಪರ ವಾದಿಸಲು ಕಾನೂನು ತಜ್ಞ ವೈದ್ಯನಾಥನ್ರನ್ನ ನೇಮಿಸಿದ್ದಾರೆ.
ಇತ್ತ ಕರ್ನಾಟಕವೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಕಾನೂನು ಹೋರಾಟದಲ್ಲಿ ಮಹಾರಾಷ್ಟ್ರಕ್ಕೆ ವಿರುದ್ಧ ವಾದ ಮಾಡಲು ಸಿದ್ದತೆ ಮಾಡಿಕೊಂಡಿದೆ.
ಕಳೆದ ಸೋಮವಾರ ಮುಖ್ಯಮಂತ್ರಿ ಬೊಮ್ಮಾಯಿ ತುರ್ತು ಸಭೆ ನಡೆಸಿದ್ರು. ಸಭೆಯಲ್ಲಿ ಗಡಿ ವಿವಾದ ಕುರಿತಂತೆ ರಾಜ್ಯದ ಪರ ಸಮರ್ಥವಾಗಿ ವಾದ ಮಂಡಿಸಲು ಬಲಿಷ್ಠ ಕಾನೂನು ತಂಡ ರಚಿಸಲಾಗಿದೆ. ಹಿರಿಯ ವಕೀಲರಾದ ಮುಕುಲ್ ರೋಹಟಗಿ, ಶಾಮ್ ದಿವಾನ್, ಉದಯ್ ಹೊಳ್ಳ ಹಾಗೂ ಮಾರುತಿ ಜಿರಲೆ ಅವರು ತಂಡದಲ್ಲಿದ್ದಾರೆ.