ಬೆಂಗಳೂರು: 2025ರ ಹೊಸ ವರ್ಷದ ಅಂಗವಾಗಿ ರಾಜ್ಯದ ಜನತೆಗೆ ಶುಭಾಶಯ ಕೋರಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಹೊಸ ವರ್ಷದಲ್ಲಿ ಹೊಸ ಚೈತನ್ಯದೊಂದಿಗೆ ರಾಜ್ಯದ ಅಭಿವೃದ್ಧಿಗೆ ಒಗ್ಗೂಡಿ ಶ್ರಮಿಸಲು ಕರೆ ನೀಡಿದ್ದಾರೆ. ಅಲ್ಲದೇ ಪ್ರೀತಿ ಮತ್ತು ಸಹಬಾಳ್ವೆಯ ಸಮಾಜ ನಿರ್ಮಾಣಕ್ಕಾಗಿ ಸಂಕಲ್ಪ ಮಾಡೋಣ ಎಂದೂ ಸಿಎಂ ಕರೆ ನೀಡಿದ್ದಾರೆ.
ಈ ಕುರಿತು ತಮ್ಮ ಅಧಿಕೃತ ‘ಎಕ್ಸ್’ ಅಕೌಂಟ್‌ನಲ್ಲಿ ಟ್ವೀಟ್ ಮಾಡಿರುವ ಸಿಎಂ ಸಿದ್ದರಾಮಯ್ಯ, “ಪ್ರೀತಿಯ ನಾಡಬಾಂಧವರಿಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವನ್ನು ಹೊಸ ಚಿಂತನೆ, ಹೊಸ ಭರವಸೆ ಹಾಗೂ ಹೊಸ ಉತ್ಸಾಹದೊಂದಿಗೆ ಬರಮಾಡಿಕೊಳ್ಳೋಣ. ಜಾತಿ, ಧರ್ಮಗಳ ದ್ವೇಷ ತೊರೆದು ಎಲ್ಲರೂ ಒಂದಾಗಿ ಪ್ರೀತಿ – ಸಹಬಾಳ್ವೆಯ ಹಾದಿಯಲ್ಲಿ ಹೆಜ್ಜೆಹಾಕೋಣ..” ಎಂದು ಕರೆ ನೀಡಿದ್ದಾರೆ.
ಮುಂದುವರೆದು, “2025ರ ನವ ವಸಂತ ತಮ್ಮೆಲ್ಲರ ಬಾಳಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ತರಲಿ ಎಂದು ಹಾರೈಸುತ್ತೇನೆ..” ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಅದರಂತೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ತಿಳಿಸಿದ್ದು, “ಎಲ್ಲರಿಗೂ 2025ರ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷವು ಸಮೃದ್ಧಭರಿತ ಆರಂಭ, ಮಿತಿಯಿಲ್ಲದ ಅವಕಾಶಗಳು ಮತ್ತು ನಿಮ್ಮ ಎಲ್ಲಾ ಪ್ರಯತ್ನಗಳು ಸಾಧನೆಯೊಂದಿಗೆ ಗುರುತಿಸಲ್ಪಡಲಿ..” ಎಂದು ಹಾರೈಸಿದ್ದಾರೆ.
ಇನ್ನುಳಿದಂತೆ ಗೃಹ ಸಚಿವರಾದ ಡಾ. ಜಿ. ಪರಮೇಶ್ವರ್ ಕೂಡ ರಾಜ್ಯದ ಜನತೆಗೆ ಹೊಸ ವರ್ಷದ ಶುಭಾಶಯ ಕೋರಿದ್ದು, ಶಾಂತಿ ಮತ್ತು ಅಭಿವೃದ್ಧಿಯ ಸಮಾಜ ನಿರ್ಮಾಣಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ದುಡಿಯೋಣ ಎಂದು ಕರೆ ನೀಡಿದ್ದಾರೆ.