ಬೆಂಗಳೂರು: ಮಹತ್ವದ ಬೆಳವಣಿಗೆಯೊಂದರಲ್ಲಿ, ಸರ್ಕಾರದ ಸಿವಿಲ್ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಕಲ್ಪಿಸುವ ಪ್ರಸ್ತಾವನೆ ಸಿಎಂ ಸಿದ್ದರಾಮಯ್ಯ ಸರ್ಕಾರದ ಮುಂದಿರುವುದು ತಿಳಿದುಬಂದಿದೆ. ಮುಸ್ಲಿಂ ಸಮುದಾಯಕ್ಕೆ ಸರ್ಕಾರದ ಗುತ್ತಿಗೆಯಲ್ಲಿ ಮೀಸಲಾತಿ ತರಲು ಸಲ್ಲಿಕೆಯಾಗಿರುವ ಪ್ರಸ್ತಾವನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮೋದನೆ ನೀಡಿದ್ದಾರೆ ಎನ್ನಲಾಗಿದ್ದು, ಕಾಯ್ದೆಯಲ್ಲಿ ಸಂಬಂಧಿತ ತಿದ್ದುಪಡಿ ಮಾಡುವಂತೆ ಹಣಕಾಸು ಇಲಾಖೆಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
1 ಕೋಟಿ ರೂ. ವರೆಗಿನ ಕಟ್ಟಡ ನಿರ್ಮಾಣ ಕಾಮಗಾರಿಗಳ ಸಾರ್ವಜನಿಕ ಗುತ್ತಿಗೆಯಲ್ಲಿ ಮುಸ್ಲಿಂ ಸಮುದಾಯವರಿಗೆ ಶೇ 4 ಮೀಸಲಾತಿ ನೀಡುವ ಬಗ್ಗೆ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಪ್ರಸ್ತಾವನೆ ಸಲ್ಲಿಸಿತ್ತು. ಇದಕ್ಕೆ ಅನುಮೋದನೆ ನೀಡಿರುವ ಸಿಎಂ, ತಿದ್ದುಪಡಿಗೆ ಸೂಚನೆ ನೀಡಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ಕಾಯ್ದೆಗೆ ತಿದ್ದುಪಡಿ ತಂದು ಮಂಡನೆ ಮಾಡಲು ಸರ್ಕಾರ ಮುಂದಾಗಿದೆ. ಈಗಾಗಲೇ ಎಸ್‌ಸಿ ಎಸ್‌ಟಿ ಸಮುದಾಯಕ್ಕೆ ಗುತ್ತಿಗೆಯಲ್ಲಿ ಶೇ 24ರ ಮೀಸಲಾತಿ ನೀಡಿರುವ ಸರ್ಕಾರ, ಒಬಿಸಿ ಸಮುದಾಯಕ್ಕೆ ಶೇ 4 ಮೀಸಲಾತಿ ನೀಡಿದೆ. 2A ಅಡಿ ಗುತ್ತಿಗೆಯಲ್ಲಿ ಶೇ 15 ಮೀಸಲಾತಿ ನೀಡಲಾಗಿದೆ. ಒಟ್ಟು ಸರ್ಕಾರದ ಕಾಮಗಾರಿಗಳಲ್ಲಿ ಶೇ 43ರಷ್ಟು ಮೀಸಲಾತಿ ನೀಡಲಾಗಿದೆ. ಈಗ ಮುಸ್ಲಿಂ ಸಮುದಾಯಕ್ಕೂ ಸರ್ಕಾರದ ಕಾಮಗಾರಿಗಳಲ್ಲಿ ಶೇ 4 ರಷ್ಟು ಮೀಸಲಾತಿ ನೀಡಲು ಮುಂದಾಗಿದೆ.