ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಂಪುಟ ವಿಸ್ತರಣೆಯಾಗಿದ್ದು, ನೂತನವಾಗಿ 24 ಸಚಿವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಈ ಮೂಲಕ ಹಾಲಿ ಅಸ್ತಿತ್ವವಿರುವ 10 ಮಂದಿಯ ಸಚಿವ ಸಂಪುಟಕ್ಕೆ 24 ಸಚಿವರು ಸೇರ್ಪಡೆಗೊಳ್ಳುವ ಮೂಲಕ ಪರಿಪೂರ್ಣ ಸಂಪುಟ ರಚನೆಯಾಗಿದೆ.
ರಾಜಭವನದ ಗಾಜಿನಮನೆಯಲ್ಲಿ ನಡೆದ ಪ್ರಮಾಣವಚನ ಸಮಾರಂಭದಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ಮೊದಲನೆಯದಾಗಿ ಸಚಿವರಾಗಿ ಹೆಚ್.ಕೆ.ಪಾಟೀಲ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಕೃಷ್ಣ ಭೈರೇಗೌಡ, ಎನ್. ಚಲುವರಾಯಸ್ವಾಮಿ, ಕೆ.ವೆಂಕಟೇಶ್ ಅವರು ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಡಾ.ಹೆಚ್. ಸಿ.ಮಹದೇವಪ್ಪ ಸತ್ಯ ಮತ್ತು ನಿಷ್ಠೆಯಿಂದ ಪ್ರಮಾಣವಚನ ಸ್ವೀಕರಿಸಿದ್ದು, ಈಶ್ವರ ಖಂಡ್ರೆಯವರು, ದಿನೇಶ್ ಗುಂಡೂರಾವ್, ಶರಣಬಸಪ್ಪ ದರ್ಶನಾಪುರ ದೇವರ ಹೆಸರಿನಲ್ಲಿ, ಕೆ.ಎನ್.ರಾಜಣ್ಣ ಬುದ್ಧ, ಬಸವ, ಅಂಬೇಡ್ಕರ್ ಮತ್ತು ವಾಲ್ಮೀಕಿ ಹೆಸರಿನಲ್ಲಿ, ಶಿವಾನಂದ ಪಾಟೀಲ್ ಅವರು ಅಣ್ಣ ಬಸವಣ್ಣನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಇನ್ನು ಆರ್.ಬಿ.ತಿಮ್ಮಾಪುರ, ಶಿವರಾಜ ತಂಗಡಗಿ, ಶರಣ ಪ್ರಕಾಶ್ ಪಾಟೀಲ್, ಮಂಕಾಳು ವೈದ್ಯ ಅವರು ದೇವರ ಹೆಸರಿನಲ್ಲಿ, ಎಸ್.ಎಸ್.ಮಲ್ಲಿಕಾರ್ಜುನ ಅವರು ಕಲ್ಲೇಶ್ವರ ದೇವರ ಹೆಸರಿನಲ್ಲಿ, ಚಿವರಾಗಿ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಜಗಜ್ಯೋತಿ ಬಸವೇಶ್ವರ, ಛತ್ರಪತಿ ಶಿವಾಜಿ ಮಹರಾಜ, ಡಾ. ಬಿ ಆರ್ ಅಂಬೇಡ್ಕರ್ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು.
ಚಿವರಾಗಿ ರಹೀಂ ಖಾನ್ ಅವರು ಇಂಗ್ಲಿಷ್ನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ತೇರು ಮಲ್ಲೇಶ್ವರ್ ದೇವರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಡಿ ಸುಧಾಕರ್, ದೇವರ ಹೆಸರಿನಲ್ಲಿ ಸಂತೋಷ್ ಲಾಡ್, ಎನ್. ಎಸ್.ಬೋಸರಾಜು, ಭೈರತಿ ಸುರೇಶ್, ಮಧು ಬಂಗಾರಪ್ಪ, ಎಂ.ಸಿ.ಸುಧಾಕರ್, ಬಿ.ನಾಗೇಂದ್ರ ಪ್ರಮಾಣವಚನ ಸ್ವೀಕರಿಸಿದರು.