ರಾಮನಗರ/ಹಾವೇರಿ/ಬಳ್ಳಾರಿ: ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು ಬಿರುಸಿನ ಮತದಾನ ನಡೆಯುತ್ತಿದೆ. ಬೆಳಗ್ಗೆಯಿಂದಲೇ ಜನರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸುತ್ತಿದ್ದಾರೆ. ಹಿರಿಯ ನಾಗರಿಕರು ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.
ಚನ್ನಪಟ್ಟಣ ಸೂಕ್ಷ್ಮ ಕೇಂದ್ರ ಆಗಿರುವುದರಿಂದ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪ್ರತಿ ಕೇಂದ್ರಗಳಿಗೂ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. 276 ಮತ ಕೇಂದ್ರಗಳಲ್ಲೂ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ.
ಕ್ಷೇತ್ರದ ಮತಗಟ್ಟೆಗಳಲ್ಲಿ ಸರತಿ ಸಾಲಲ್ಲಿ ನಿಂತು ಜನರು ವೋಟ್ ಮಾಡುತ್ತಿದ್ದಾರೆ. ವೃದ್ಧರೊಬ್ಬರು ಚನ್ನಪಟ್ಟಣ ಸರ್ಕಾರಿ ಬಾಲಕಿಯರ ಕಾಲೇಜು ಬೂತ್‌ನಲ್ಲಿ ವ್ಹೀಲ್ ಚೇರ್‌ನಲ್ಲಿ ಬಂದು ಮತದಾನ ಮಾಡಿದರು.
ಸಖಿ ಬೂತ್‌ಗಳು ಸಿಂಗಾರಗೊಂಡು ಮಹಿಳಾ ಮತದಾರರನ್ನು ಸೆಳೆಯುತ್ತಿವೆ. ಪಿಂಕ್ ಬಲೂನ್‌ಗಳಿಂದ ಬೂತ್ ಸಿಂಗಾರಗೊಳಿಸಲಾಗಿದೆ. ಮತಗಟ್ಟೆಗಳಲ್ಲಿ ಮಹಿಳೆಯರು, ಪುರುಷರು, ವೃದ್ಧರು ಮತದಾನಕ್ಕೆ ಕ್ಯೂನಲ್ಲಿ ನಿಂತಿದ್ದಾರೆ. ದೊಡ್ಡಮಳೂರು ಕೇಂದ್ರದಲ್ಲಿ 96 ವರ್ಷದ ವೃದ್ಧೆಯೊಬ್ಬರು ವ್ಹೀಲ್‌ಚೇರ್‌ನಲ್ಲಿ ಬಂದು ಮತ ಚಲಾಯಿಸಿದರು. ಆ ಮೂಲಕ ಯುವಜನರಲ್ಲಿ ಮತದಾನದ ಉತ್ಸಾಹ ತುಂಬಿದರು.
ಶಿಗ್ಗಾಂವಿ ಕ್ಷೇತ್ರದಲ್ಲಿ ಮತದಾನ ಬಿರುಸಿನಿಂದ ಸಾಗಿದೆ. ಪಟ್ಟಣದ ಮತಗಟ್ಟೆ ಸಂಖ್ಯೆ 99 ರಲ್ಲಿ ಯುವತಿಯೊಬ್ಬರು ಮೊದಲ ಬಾರಿಗೆ ತಮ್ಮ ಹಕ್ಕನ್ನ ಚಲಾಯಿಸಿ ಸಂಭ್ರಮಿಸಿದ್ದಾರೆ. ‘ಯುವ ಮತದಾರರು ಮನೆಯಲ್ಲಿ ಕುಳಿತುಕೊಳ್ಳದೆ ಮತದಾನ ಮಾಡಬೇಕು. ನಾವು ಪಕ್ಷ ನೋಡಿ ಮತದಾನ ಮಾಡಬಾರದು. ಅಭಿವೃದ್ಧಿ ಮಾಡುವಂತಹ ವ್ಯಕ್ತಿಗೆ ಮತ ಹಾಕಬೇಕೆಂದು ಯುವತಿ ಜಾಹ್ನವಿ ಕರೆ ಕೊಟ್ಟಿದ್ದಾರೆ.
ಬಳ್ಳಾರಿಯ ಸಂಡೂರು ತಾಲೂಕಿನ ವೆಂಕಟಗಿರಿ ಗ್ರಾಮದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ಸಾಲಾಗಿ ನಿಂತು ಮತದಾರರು ವೋಟ್ ಮಾಡುತ್ತಿದ್ದಾರೆ. ಮತದಾನ ದಿನವನ್ನು ಪ್ರಜಾಪ್ರಭುತ್ವ ಹಬ್ಬವಾಗಿಸಲು ಜಿಲ್ಲಾಡಳಿತ ಪಣ ತೊಟ್ಟಿದೆ. ಖಾಸಗಿ, ಸರ್ಕಾರಿ ಎಲ್ಲ ಸಂಸ್ಥೆಗಳಿಗೆ ರಜೆ ನೀಡಿ ಬಳ್ಳಾರಿ ಜಿಲ್ಲಾಧಿಕಾರಿ ಪ್ರಶಾಂತ್ ಮಿಶ್ರಾ ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿ ಆದೇಶ ಹಿನ್ನೆಲೆಯಲ್ಲಿ ಗಣಿ ಕಂಪನಿಗಳಿಗೂ ರಜೆ ನೀಡಲಾಗಿದೆ. ಮೈನಿಂಗ್ ಕಂಪನಿಗೆ ರಜೆ, ಡಿಗ್ಗಿಂಗ್ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಟಿಪ್ಪರ್, ಲಾರಿಗಳ ಓಡಾಟ ಬಂದ್ ಆಗಿದೆ.
ಸಂಡೂರು-ಹೊಸಪೇಟೆ, ಸಂಡೂರು-ತೋರಣಗಲ್ ಮಾರ್ಗವಾಗಿ ನಿತ್ಯ ನೂರಾರು ಟಿಪ್ಪರ್ ಓಡಾಡುತ್ತಿದ್ದವು. ವೋಟಿಂಗ್ ಹಿನ್ನೆಲೆಯಲ್ಲಿ ಲಾರಿ ಮಾಲೀಕರು, ಚಾಲಕರು ಮತದಾನ ಮಾಡುವುದಕ್ಕಾಗಿ ಲಾರಿ ಸಂಚಾರ ನಿಷೇಧಿಸಲಾಗಿದೆ.
ಸಂಡೂರಿನ ಗ್ರಾಮಾಂತರದ ಪ್ರದೇಶದಲ್ಲಿ ಚುರುಕಿನ ಮತದಾನ ಸಾಗಿದೆ. ಗ್ರಾಮೀಣದ ಸುಶೀಲಾನಗರ, ಜೈಸಿಂಗ್ ಪುರ, ವಿಠಲ್ ನಗರ, ತಾರಾನಗರ ಸೇರಿ ಹಲವು ಕಡೆ ಬಿರುಸಿನಿಂದ ಮತದಾನ ಸಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸಾಲು ನಿಂತು ಜನರ ಮತದಾನ ಮಾಡುತ್ತಿದ್ದಾರೆ. ಕೃಷಿ ಚಟುವಟಿಕೆ, ಕೂಲಿ ಕೆಲಸಕ್ಕೆ ಹೋಗುವ ಮತದಾರರಿಂದ ಬಿರುಸಿನ ಮತದಾನ ಸಾಗಿದೆ. ಆದರೆ ಪಟ್ಟಣ, ನಗರ ಪ್ರದೇಶಗಳಲ್ಲಿ ಮಂದಗತಿಯ ಮತದಾನವಾಗುತ್ತಿದೆ. ಸಂಡೂರಿನ ಪುರಸಭೆ, ವಿದ್ಯಾಮಂದಿರ, ಜಿ.ಪಂ. ಎಂಜಿನಿಯರಿಂಗ್ ಕಚೇರಿಯ ಮತಗಟ್ಟೆಯಲ್ಲಿ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.