ನವದೆಹಲಿ: ಚಂದ್ರನಲ್ಲಿ ರಾತ್ರಿ ಅಂತ್ಯವಾಗಿದ್ದು (ಚಂದ್ರನ ಒಂದು ದಿನ ಭೂಮಿಯ 14 ದಿನಕ್ಕೆ ಸಮ), ಸೂರ್ಯೋದಯವಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಿದ್ರೆಯಲ್ಲಿರುವ ಚಂದ್ರಯಾನ-3 ಲ್ಯಾಂಡರ್ ಮತ್ತು ರೋವರ್ ಎಚ್ಚರಗೊಳಿಸಲು ಇಸ್ರೋ ಪ್ರಯತ್ನ ನಡೆಸುತ್ತಿದೆ. ಆದರೆ ಲ್ಯಾಂಡರ್ ಮತ್ತು ರೋವರ್‌ನಿಂದ ಇದುವರೆಗೂ ಯಾವುದೇ ಸಿಗ್ನಲ್ ಸಿಕ್ಕಿಲ್ಲ.
ಎರಡು ವಾರಗಳ ಚಂದ್ರನ ರಾತ್ರಿಯಿಂದಾಗಿ ಲ್ಯಾಂಡರ್ ಮತ್ತು ರೋವರ್ ಅನ್ನು ಸ್ಲೀಪ್ ಮೋಡ್‌ನಲ್ಲಿ ಇರಿಸಲಾಗಿತ್ತು. ಈಗ ಚಂದ್ರನ ದಕ್ಷಿಣ ಧ್ರುವದಲ್ಲಿ ಬೆಳಕಾಗಿದ್ದು, ಸಂಪರ್ಕ ಸ್ಥಾಪಿಸುವ ಪ್ರಯತ್ನ ಮುಂದುವರಿಯಲಿದೆ ಎಂದು ಇಸ್ರೋ ಹೇಳಿದೆ.
ಇಸ್ರೋ ಚೇರಮನ್ ಎಸ್.ಸೋಮನಾಥ ಈ ಕುರಿತು ಮಾಹಿತಿ ನೀಡಿದ್ದು ಇದು ಯಾವಾಗ ಎದ್ದೇಳುತ್ತದೆ ಎನ್ನುವುದು ತಿಳಿಯದು. ಅದು ನಾಳೆಯೂ ಆಗಿರಬಹುದು ಅಥವಾ ಚಂದ್ರದಿನದ ಕೊನೆಯ ದಿನವೂ ಆಗಿರಬಹುದು. ಆದರೆ ನಮ್ಮ ಪ್ರಯತ್ನ ನಡೆಯುತ್ತಿದೆ. ಇವೆರಡೂ ಪುನಶ್ಚೇತನಗೊಂಡರೆ ಅದು ಮಹತ್ವದ ಸಾಧನೆಯಾಗಲಿದೆ” ಎಂದು ಹೇಳಿದ್ದಾರೆ.
ಹದಿನಾಲ್ಕು ದಿನಗಳ ಕಾಲ ಅಂದರೆ ಒಂದು ಚಂದ್ರದಿನದ ವೇಳೆ ಸಂಪೂರ್ಣ ಕತ್ತಲು ಮತ್ತು ಮೈನಸ್ 200 ರಿಂದ 25ಡಿಗ್ರಿ ಸೆಂಟಿಗ್ರೇಡ್ ಶೀತದ ವಾತಾವರಣದಲ್ಲಿದ್ದ ಲ್ಯಾಂಡರ್ ಮತ್ತು ರೋವರ್ ಸಾಧನಗಳಿಗೆ ವಿದ್ಯುತ್ ದಾಸ್ತಾನು ಮಾಡುವ ಬ್ಯಾಟರಿಗಳಿಗೆ ಧಕ್ಕೆ ಉಂಟಾಗಿ ಇದು ಸ್ಪಂದಿಸದೇ ಇರುವ ಸಾಧ್ಯತೆಯೂ ಇದೆ.