ಬೆಂಗಳೂರು : ರಾಜ್ಯದ ಮಹತ್ವಾಕಾಂಕ್ಷಿ ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ್ದು, ದಸರಾ ಬಳಿಕ ಯೋಜನೆಯ ಕಾಮಗಾರಿಗೆ ಚಾಲನೆ ಸಿಗುವ ಸಾಧ್ಯತೆ ಇದೆ.
ಮಹದಾಯಿ ಯೋಜನೆ ಜಾರಿ ಸಂಬಂಧ ಕೇಂದ್ರ ಜಲಶಕ್ತಿ ಇಲಾಖೆ ಅನುಮೋದನೆ ನೀಡಿದೆ. ದಸರಾ ಹಬ್ಬದ ಕಾರಣ ಸರ್ಕಾರಿ ರಜೆ ಇರುವ ಹಿನ್ನೆಲೆಯಲ್ಲಿ ಕೇಂದ್ರ ಜಲಶಕ್ತಿ ಇಲಾಖೆಯು ನೀಡಿರುವ ಅನುಮೋದನೆ ಆದೇಶವು ರಾಜ್ಯ ಸರ್ಕಾರದ ಕೈಗೆ ಮುಂದಿನ ವಾರ ಸಿಗಲಿದೆ.
20 ವರ್ಷಗಳ ಬಳಿಕ ಮುಹೂರ್ತ ಒದಗಿ ಬಂದಿದ್ದು, ಕೇಂದ್ರದ ಆದೇಶ ರಾಜ್ಯ ಸರ್ಕಾರಕ್ಕೆ ತಲುಪುತ್ತಿದ್ದಂತೆ ಯೋಜನೆ ಕಾಮಗಾರಿ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ನೀಡಲು ಸರ್ಕಾರ ಸಿದ್ಧತೆ ನಡೆಸಿದೆ. ವಿಸ್ತೃತ ಯೋಜನಾ ವರದಿಗೆ ಈಗಾಗಲೆ ಅಂತಾರಾಜ್ಯ ನದಿ ನೀರು ವಿವಾದ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗ ಅನುಮತಿ ನೀಡಿವೆ.