ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ನಡೆಸದೆ ಇರುವ ಕಾರಣ ಕೇಂದ್ರ ಸರ್ಕಾರದಿಂದ ಬರುವ ಸಾವಿರಾರು ಕೋಟಿ ರೂ. ಅನುದಾನ ಪಡೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. 15ನೇ ಹಣಕಾಸು ಯೋಜನೆಯಡಿ 2023-24ನೇ ಸಾಲಿಗಿಂತ ಮೊದಲಿನ ಬಾಕಿ 2100 ಕೋಟಿ ರೂ. ಹಾಗೂ 2024-25ನೇ ಸಾಲಿನ ಸುಮಾರು 700 ಕೋಟಿ ರೂ. ಸೇರಿ ಒಟ್ಟು 2800 ಕೋಟಿ ರೂ.ಗೆ ಬಿಡುಗಡೆಯಾಗಿಲ್ಲ.
ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿರುವ ಸರ್ಕಾರ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಅನುದಾನ ಪಡೆಯುವಲ್ಲಿ ತೀವ್ರ ಹಿನ್ನಡೆ ಅನುಭವಿಸುತ್ತಿದೆ. ಹೀಗಾಗಿ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳು ಅಭಿವೃದ್ಧಿ ಅನುದಾನವಿಲ್ಲದೇ ನರಳುತ್ತಿವೆ. 2021ರಿಂದ ಚುನಾವಣೆ ನಡೆದಿಲ್ಲ: ಕ್ಷೇತ್ರ ಪುನರ್ವಿಂಗಡಣೆ, ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ಕಾರಣದಿಂದ 2021ನೇ ಸಾಲಿನ ಮೇ/ಜೂನ್ ತಿಂಗಳಲ್ಲಿ ನಡೆಯಬೇಕಿದ್ದ ಚುನಾವಣೆ ಇದುವರೆಗೂ ನಡೆದಿಲ್ಲ. ಹೈಕೋರ್ಟ್ ಮಟ್ಟಿಲೇರುತ್ತಿರುವ ಕಾರಣ ಚುನಾವಣೆ ವಿಳಂಬವಾಗಿವೆ. ಇದು ಕೇವಲ ಒಂದು ಸರ್ಕಾರದ ಅವಧಿಯಲ್ಲಾದ ವಿಳಂಬವಲ್ಲ. ಸಮ್ಮಿಶ್ರ ಸರ್ಕಾರ ಸೇರಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳೂ ಚುನಾವಣೆ ನಡೆಸುವಲ್ಲಿ ವಿಫಲವಾಗಿವೆ.
31 ಜಿಲ್ಲೆಗಳ 239 ತಾಲೂಕುಗಳಲ್ಲಿ ಒಟ್ಟು 1130 ಜಿಲ್ಲಾ ಪಂಚಾಯಿತಿ ಸದಸ್ಯ ಕ್ಷೇತ್ರ ಹಾಗೂ 3671 ತಾಲೂಕು ಪಂಚಾಯಿತಿ ಸದಸ್ಯ ಕ್ಷೇತ್ರಗಳನ್ನು ವಿಂಗಡಿಸಲಾಗಿದೆ. ಈ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಸಬೇಕಿದೆ. ರಾಜ್ಯದಲ್ಲಿ ಒಟ್ಟು 5.5 ಕೋಟಿ ಮತದಾರರಿದ್ದು, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯಲ್ಲಿ ಸುಮಾರು 3 ಕೋಟಿಗೂ ಹೆಚ್ಚು ಜನರು ಮತದಾನದ ಹಕ್ಕು ಹೊಂದಿದ್ದಾರೆ. ಹೀಗಾಗಿ ಈ ಚುನಾವಣೆಯನ್ನು ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಗಂಭೀರವಾಗಿ ಪರಿಗಣಿಸಿವೆ. ಚುನಾವಣೆ ಘೋಷಣೆಯಾಗಬಹುದೆಂದು ತಾಲೀಮು ಆರಂಭಿಸಿವೆ. ಮೀಸಲಾತಿ ಗಡುವು: ಕ್ಷೇತ್ರ ಪುನರ್ವಿಂಗಡಣೆ ವಿಚಾರದಲ್ಲಿ ಸರ್ಕಾರ ನಿವೃತ್ತ ಐಎಎಸ್ ಅಧಿಕಾರಿ ಲಕ್ಷ್ಮೀನಾರಾಯಣ ಹಾಗೂ ಬಳಿಕ ಬಂದ ಸರ್ಕಾರ ಮತ್ತೊಬ್ಬ ನಿವೃತ್ತ ಐಎಎಸ್ ಅಧಿಕಾರಿ ಎಂ.ಆರ್. ಕಾಂಬ್ಳೆ ನೇತೃತ್ವದಲ್ಲಿ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಿದ್ದವು. ಹೀಗಾಗಿ ಕ್ಷೇತ್ರ ಪುನರ್ವಿಂಗಡಣೆ ವಿಳಂಬವಾಗಿತ್ತು. ಈಗ ಕ್ಷೇತ್ರ ಪುನರ್ವಿಂಗಡಣೆ ಸಮಸ್ಯೆ ಬಗೆಹರಿದಿದೆ.
ಇದಕ್ಕೂ ಮೊದಲು ಬಿಬಿಎಂಪಿ ಸೇರಿದಂತೆ ನಗರ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳ ಎ ಮತ್ತು ಬಿ ಪ್ರವರ್ಗದ ಸಮುದಾಯಗಳಿಗೆ ಮೀಸಲಾತಿ ಹೆಚ್ಚಿಸುವ ವರದಿ ಸಲ್ಲಿಕೆಯಾಗಿತ್ತು. ಆ ಎಲ್ಲ ಪ್ರಕ್ರಿಯೆಗಳು ನಡೆದರೂ ಮೀಸಲಾತಿ ಗೊಂದಲ ಇನ್ನೂ ಪರಿಹಾರ ಕಂಡಿಲ್ಲ. ಅಲ್ಲದೆ, ಸರ್ಕಾರ ಮೀಸಲಾತಿ ನಿಗದಿ ಮಾಡಲು ಕೋರ್ಟ್ನಲ್ಲಿ ಪದೇ ಪದೆ ಗಡುವು ಕೇಳುತ್ತಿದೆ. ಹಾಗಾಗಿ ಚುನಾವಣೆ ಮುಂದೆ ಹೋಗುತ್ತಲೇ ಇದೆ. ಅನುದಾನ ಬಿಡುಗಡೆ ಏಕಿಲ್ಲ?: ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಸರ್ಕಾರಗಳು ಇಲ್ಲದೇ ಇದ್ದಲ್ಲಿ ಕೇಂದ್ರ ಸರ್ಕಾರದ 15ನೇ ಹಣಕಾಸು ಆಯೋಗದ ಅನುದಾನ ಹಂಚಿಕೆ ಆಗುವುದಿಲ್ಲ. ಜತೆಗೆ ರಾಜ್ಯ ಸರ್ಕಾರ ಕೂಡ ಹಣಕಾಸು ಆಯೋಗ ರಚಿಸಿ ಅದರಿಂದ ವರದಿ ಪಡೆದು ಆ ವರದಿಯನ್ನು ಅನುಪಾಲನಾ ವರದಿಯೊಂದಿಗೆ ವಿಧಾನ ಮಂಡಲದಲ್ಲಿ ಅಂಗೀಕರಿಸಬೇಕು. ಆಗ ಮಾತ್ರ 15ನೇ ಹಣಕಾಸು ಆಯೋಗದ ಅನುದಾನ ಬಿಡುಗಡೆಯಾಗುತ್ತದೆ. ರಾಜ್ಯ ಸರ್ಕಾರ 2021 ರಿಂದ ತಾಲೂಕು, ಜಿಲ್ಲಾ ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ನಡೆಸದೇ ಇರುವುದರಿಂದ 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಬರಬೇಕಿದ್ದ 2,100 ಕೋಟಿ ರೂ. ಬಂದಿಲ್ಲ ಎಂದು ರಾಜ್ಯ 5ನೇ ಹಣಕಾಸು ಆಯೋಗದ ಮಧ್ಯಂತರ ವರದಿಯಲ್ಲೇ ಸ್ಪಷ್ಟಪಡಿಸಿ ಕ್ರಮಕ್ಕೆ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಆಡಳಿತ ಅಧಿಕಾರಿಗಳ ಅವಜ್ಞೆ: ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ಗಳೇ ದರ್ಬಾರು ನಡೆಸುತ್ತಿದ್ದಾರೆ. ಬಹುತೇಕ ಕಡೆ ಆಡಳಿತಾಧಿಕಾರಿ ಗಳು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಚುನಾಯಿತ ಸರ್ಕಾರಗಳಿಲ್ಲದೇ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿ ಆಡಳಿತ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಜನ ಸಣ್ಣಪುಟ್ಟ ಸಮಸ್ಯೆಗಳಿಗೂ ಪರದಾಡುವಂತಾಗಿದೆ. ಅಪ್ಲೋಡ್ ಆಗದ ಮಾಹಿತಿ: ಗ್ರಾಪಂಗಳನ್ನು ಡಿಜಿಟಲೀಕರಣ ಗೊಳಿಸಲು ಕೇಂದ್ರ ಸರ್ಕಾರ ಇ ಗ್ರಾಮ ಸ್ವರಾಜ್ ಅಪ್ಲಿಕೇಷನ್ ರೂಪಿಸಿದೆ. ಈ ಆಪ್ನಲ್ಲಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಮಾಹಿತಿ ಅಪ್ಲೋಡ್ ಮಾಡಬೇಕು. ಆದರೆ, ರಾಜ್ಯ ಸರ್ಕಾರ ಈ ಕೆಲಸ ಮಾಡದೇ ಇರುವುದರಿಂದ ಕೇಂದ್ರ ಸರ್ಕಾರದಿಂದ ಬರಬೇಕಾದ 2637 ಕೋಟಿ ರೂ. ಕೂಡ ಬಂದಿಲ್ಲ.