ವರದಿ : ರತ್ನಾಕರ ಗೌಂಡಿ
ಬೆಳಗಾವಿ: ನಗರದ ಕೇಂದ್ರಿಯ ಬಸ್ ನಿಲ್ದಾಣ ಕಳೆದ ಆರೇಳು ವರ್ಷಗಳಿಂದ ನಿರ್ಮಾಣಗೊಳ್ಳುತ್ತಿದ್ದು, ಅನೇಕ ಕಾರಣಗಳಿಂದಾಗಿ ವಿಳಂಬ ಹಾಗೂ ಕಾಮಗಾರಿ ಹಿನ್ನಡೆ ಉಂಟಾಗುತ್ತಿತ್ತು.
ಈಗ ಬೆಳಗಾವಿ ಬಸ್ ನಿಲ್ದಾಣ ನೂತನ ಕಟ್ಟಡ ಹಾಗೂ ಸುತಕ್ಷಿತ ಎಲ್ಲಾ ಸೇವೆಗಳನ್ನು ಒಳಗೊಂಡಿರುವ ಒಂದು ಸುಂದರವಾದ ಕಟ್ಟಡ ಬೆಳಗಾವಿ ಜನತೆಯ ಸೇವೆಗಾಗಿ ಸಜ್ಜಾಗಿ ನಿಂತಿದೆ.
ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನನ್ನ ವೃತ್ತಿ ಜೀವನದ ಪ್ರಾರಂಭದ ದಿನಗಳಲ್ಲಿ ಪುಣೆಯಿಂದ ಬೆಳಗಾವಿ ಮೂಲಕ ನಮ್ಮೂರಿಗೆ ನಾನು ಪ್ರಯಾಣಿಸುತ್ತಿದ್ದೆ. ಈ ಬಸ್ ನಿಲ್ದಾಣ ಆಗ ದುಃಸ್ಥಿತಿಯಲ್ಲಿ ಇರೋದನ್ನು ನಾನು ನೋಡಿದ್ದೇನೆ. ಆದರೆ ಈಗ ಎಲ್ಲಾ ಸೇವೆಗಳನ್ನು ಒಳಗೊಂಡಿರುವ ನಿಲ್ದಾಣ ಜನರ ಸೇವೆಗಾಗಿ ಸಜ್ಜಾಗಿದೆ.
ಹುಬ್ಬಳ್ಳಿ – ಬೆಳಗಾವಿಗೆ ವಂದೇ ಭಾರತ್ ವಿಸ್ತರಣೆ ಮಾಡಲಾಗುವುದು. ಅತಿ ಹೆಚ್ಚು ಸೇವೆ ನೀಡುವುದರ ಮೂಲಕ ಲಾಭದಾಯಕವಾಗಿ ಈ ಸಂಸ್ಥೆಯನ್ನು ಪರಿವರ್ತಿಸುತ್ತೇವೆ.
ಮುಂಬರುವ ದಿನಗಳಲ್ಲಿ ಬೆಂಗಳೂರಿನಿಂದ ಹುಬ್ಬಳ್ಳಿ ಬೆಳಗಾವಿ ವಂದೇ ಭಾರತ್ ರೈಲು ವಿಸ್ತರಣೆ ಮಾಡಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, 32 ಕೋಟಿಗಳ ಅನುದಾನದಲ್ಲಿ ಸುಂದರ ಬಸ್ ನಿಲ್ದಾಣ ನಿರ್ಮಾಣವಾಗಿದ್ದು, ಈ ಬಸ್ ನಿಲ್ದಾಣವನ್ನು ಸ್ವಚ್ಛ ಹಾಗೂ ಸುಂದರವಾಗಿ ಇಡುವುದು ಸಾರ್ವಜನಿಕರ ಜವಾಬ್ದಾರಿಯಾಗಿದೆ ಎಂದರು.
ಇನ್ನು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಮಾತನಾಡುತ್ತಾ, ಇದು ನನ್ನ ಕನಸಿನ ಹಾಗೂ ಒಂದು ಮಹತ್ವದ ಯೋಜನೆಯಾಗಿತ್ತು. ಹಲವಾರು ಬಾರಿ ಸದನದ ಒಳಗೆ ಹಾಗೂ ಹೊರಗೆ ಈ ವಿಷಯದ ಕುರಿತು ಸಾರಿಗೆ ಸಚಿವರು ಮುಖ್ಯಮಂತ್ರಿಗಳ ಜೊತೆ ನಾನು ವಿಷಯ ಪ್ರಸ್ತಾಪಿಸುತ್ತಾ ಬಂದಿದ್ದೆ.
ಈಗ ಬೆಳಗಾವಿಗೆ ಒಂದು ಸುಂದರವಾದ ಹಾಗೂ ವಿಶಾಲ ವಿಸ್ತರಣೆ ಹೊಂದಿರುವ ಬಸ್ ನಿಲ್ದಾಣ ನಮಗೆ ಲಭ್ಯವಾಗಿದೆ ಎಂದು ತಮ್ಮ ಸಂತೋಷ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜು, ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್, ರಾಯಬಾಗ್ ಶಾಸಕ ದುರ್ಯೋಧನ ಐಹೊಳೆ, ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ, ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಕೇಂದ್ರ ಕಚೇರಿಯ ಉಪಾಧ್ಯಕ್ಷ ಡಾ. ಬಸವರಾಜ್ ಕಲೆಗಾರ್ ಉಪಸ್ಥಿತರಿದ್ದರು.