ಒಡಿಶಾದ ಬಾಲಸೋರ್‌ನಲ್ಲಿ ಸಂಭವಿಸಿದ ರೈಲು ಅಪಘಾತದ ತನಿಖೆಗಾಗಿ ಸಿಬಿಐ ಘಟನಾ ಸ್ಥಳಕ್ಕೆ ತಲುಪಿದೆ. ಜೂನ್ 2 ರಂದು ಸಂಭವಿಸಿದ ಬಾಲಸೋರ್ ರೈಲು ಅಪಘಾತದಲ್ಲಿ ಇದುವರೆಗೆ 278 ಜನರು ಸಾವನ್ನಪ್ಪಿದ್ದಾರೆ. ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ಈ ಅಪಘಾತದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ.
ತನಿಖೆಗೆ ಬಂದಿರುವ ಸಿಬಿಐ ಇದೀಗ ಮೂರು ರೈಲುಗಳ ನಡುವೆ ಡಿಕ್ಕಿ ಸಂಭವಿಸಿದ್ದು ಯಾವುದೋ ಪಿತೂರಿಯಿಂದ ನಡೆದಿದೆಯೇ ಎನ್ನುವ ಮಾಹಿತಿ ಕಲೆ ಹಾಕುತ್ತಿದೆ. 10 ಸದಸ್ಯರ ಸಿಬಿಐ ತಂಡ ಸೋಮವಾರ ಬಾಲಸೋರ್ ರೈಲು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಅಪಘಾತದ ತನಿಖೆ ಆರಂಭಿಸಿದೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ರೈಲ್ವೆ ಸುರಕ್ಷತಾ ಆಯುಕ್ತ ಶೈಲೇಶ್ ಕುಮಾರ್ ಪಾಠಕ್ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ಬಹನಾಗಾ ಬಜಾರ್ ರೈಲು ನಿಲ್ದಾಣದ ಕಂಟ್ರೋಲ್ ರೂಂ, ಸಿಗ್ನಲ್ ರೂಂ ಹಾಗೂ ಸಿಗ್ನಲ್ ಪಾಯಿಂಟ್ ಗೂ ಭೇಟಿ ನೀಡಿದರು.
ಜೂನ್ 3 ರಂದು, ರೈಲು ಅಪಘಾತದ ಬಗ್ಗೆ ಭಾರತೀಯ ದಂಡ ಸಂಹಿತೆ ಮತ್ತು ರೈಲ್ವೆ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಬಾಲಸೋರ್‌ನ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ಪ್ರಕರಣವನ್ನು ದಾಖಲಿಸಿದ್ದಾರೆ. ಮೂವರು ಗಾಯಾಳುಗಳ ಸಾವಿನ ನಂತರ, ಸಾವಿನ ಸಂಖ್ಯೆ 278 ಕ್ಕೆ ಏರಿದೆ.
ಒಡಿಶಾ ರೈಲು ಅಪಘಾತದಲ್ಲಿ ಸೋಮವಾರ ಗಾಯಗೊಂಡ ಮೂವರು ಸಾವನ್ನಪ್ಪಿದ ನಂತರ ಅಧಿಕೃತ ಸಾವಿನ ಸಂಖ್ಯೆ 278 ಕ್ಕೆ ಏರಿದೆ ಎಂದು ರೈಲ್ವೆ ತಿಳಿಸಿದೆ. ಆದಾಗ್ಯೂ, ಒಡಿಶಾ ಸರ್ಕಾರದ ಅಂಕಿಅಂಶಗಳ ಪ್ರಕಾರ, ಸಾವಿನ ಸಂಖ್ಯೆ ಇನ್ನೂ 275 ಆಗಿದೆ.
278 ಮೃತ ದೇಹಗಳ ಪೈಕಿ 177 ಮೃತದೇಹಗಳನ್ನು ಗುರುತಿಸಲಾಗಿದೆ. ನಾಪತ್ತೆಯಾದ ಜನರ ಪತ್ತೆಗೆ ರೈಲ್ವೆ ಇಲಾಖೆಯು ಒಡಿಶಾ, ಪಶ್ಚಿಮ ಬಂಗಾಳ, ಜಾರ್ಖಂಡ್, ಛತ್ತೀಸ್‌ಗಢ, ಬಿಹಾರ, ತೆಲಂಗಾಣ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳಲ್ಲಿ ಜನರನ್ನು ನಿಯೋಜಿಸಿದೆ ಎಂದು ಅವರು ಹೇಳಿದರು.