ಶಿವಮೊಗ್ಗ: ಸರ್ಕಾರ ಬೀಳಿಸುವ ಯತ್ನ ನಡೆಯುತ್ತಿದೆ ಎಂಬ ಕಾಂಗ್ರೆಸ್ನ (Congress) ಆರೋಪ ಹುಚ್ಚುತನದ ಪರಮಾವಧಿ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ( B. S. Yediyurappa) ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ (Shivamogga) ಸುದ್ದಿಗಾರರೊಂದಿಗೆ ಅವರ ಮಾತನಾಡಿದರು. ಈ ವೇಳೆ, ಸರ್ಕಾರ ಬೀಳಿಸುವ ಕೆಲಸ ಯಾರು ಮಾಡುತ್ತಿಲ್ಲ. ಬಿಜೆಪಿ ಶಾಸಕರನ್ನೂ ಯಾರು ಕರೆಯುತ್ತಿಲ್ಲ. ಕಾಂಗ್ರೆಸ್ ಶಾಸಕರನ್ನೂ ಯಾರು ಕರೆಯುತ್ತಿಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಮೂರು ಕ್ಷೇತ್ರಗಳ ಉಪ ಚುನಾವಣೆ ಮುಗಿದಿದೆ. ಈ ಕ್ಷೇತ್ರಗಳ ವಾತಾವರಣ ಚೆನ್ನಾಗಿತ್ತು. ಜನರು ಒಳ್ಳೆಯ ಬೆಂಬಲ ಕೊಡುತ್ತಿದ್ದರು. ಈ ಮೂರು ಕ್ಷೇತ್ರಗಳಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ.
ವಕ್ಫ್ ಬೋರ್ಡ್ ವಿರುದ್ಧ ಕಮಿಟಿ ರಚನೆ ವಿಚಾರವಾಗಿ, ವಕ್ಫ್ ಬೋರ್ಡ್ ಆಸ್ತಿ ಕಬಳಿಕೆ ವಿರುದ್ಧ ಬಿಜೆಪಿ ಕಮಿಟಿ ರಚನೆ ಮಾಡಿದ್ದೇವೆ. ಈ ಕಮಿಟಿ ರಾಜ್ಯದಲ್ಲಿ ಪ್ರವಾಸ ಮಾಡಿ ಬಳಿಕ ವರದಿ ಕೊಡಲಿದೆ. ವರದಿಯನ್ನು ಪಡೆದ ನಂತರ ಮುಂದಿನ ಹೋರಾಟ ನಿರ್ಧಾರವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕೋವಿಡ್ ಕಾಲದಲ್ಲಿ ನಾವು ಜೀವ ಉಳಿಸುವ ಕೆಲಸ ಮಾಡಿದ್ದೇವೆ. ಇದನ್ನು ತನಿಖೆ ಮಾಡಲು ದುರುದ್ದೇಶದಿಂದ ಎಸ್ಐಟಿ ರಚನೆ ಮಾಡಲಾಗಿದೆ. ಜನರ ಗಮನ ಬೇರೆಡೆ ತಿರುಗಿಸಲು ಹಗರಣ ನಡೆದಿದೆ ಎಂಬ ಮಾತು ಹೇಳ್ತಿದ್ದಾರೆ. ನಾವು ಎಲ್ಲಾ ರೀತಿ ತನಿಖೆ ಎದುರಿಸಿ ಅದರಿಂದ ಹೊರಗೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.