ಶಿವಮೊಗ್ಗ: ಲಂಬಾಣಿ ಸಮುದಾಯವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕರ್ನಾಟಕ ತಾಂಡಾ ನಿಗಮ ಮಂಡಳಿ ಸ್ಥಾಪಿಸಲಾಗಿದ್ದು ಬಂಜಾರ ಸಮುದಾಯದ ಯಾರೊಬ್ಬರೂ ಮನೆ ಇಲ್ಲದೆ ಬದುಕಬಾರದು ಇದು ನಮ್ಮ ಸರ್ಕಾರದ ಭರವಸೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಬಾಲರಾಜ್ ಅರಸ್ ರಸ್ತೆಯ ಬಂಜಾರ ಸಮುದಾಯ ಭವನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಷ್ಟದ ಬದುಕನ್ನು ಸಾಗಿಸುವ ಶ್ರಮ ಜೀವಿಗಳು ಬಂಜಾರ ಸಮುದಾಯದವರು. ‘ಬಂಜಾರ ಸಮುದಾಯಕ್ಕೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು 52,000 ಹಕ್ಕಪತ್ರ ವಿತರಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ 5,000 ಹಕ್ಕು ಪತ್ರ ವಿತರಿಸುವ ಯೋಜನೆ ರೂಪಿಸಲಾಗಿದೆ. ಎಲ್ಲಾ ಸಮುದಾಯಗಳ ಅಭಿವೃದ್ಧಿಗೆ ಶಕ್ತಿ ಮೀರಿ ಪ್ರಯತ್ನ ಮಾಡಿದ್ದೇನೆ. ಅದೇ ರೀತಿ ಬಂಜಾರ ಸಮುದಾಯವನ್ನೂ ಕೂಡ ಮುಖ್ಯ ವಾಹಿನಿಗೆ ತರುವ ಮೂಲಕ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ನೀಡುವ ಉದ್ದೇಶ ಸರ್ಕಾರಕ್ಕೆ ಇದೆ’ ಎಂದು ಹೇಳಿದರು.