ಬೆಳಗಾವಿ: ಗಡಿ ವಿವಾದ ತಾರಕಕ್ಕೇರಿದೆ. ಮಹಾರಾಷ್ಟ್ರ ನೋಂದಣಿ ಲಾರಿಗಳ ಮೇಲೆ ಕಲ್ಲು ತೂರಾಟ ನಡೆಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲು ತೂರಾಟ ನಡೆಸಿದ ಕಾರ್ಯಕರ್ತರು ಮತ್ತು ಸಂಘಟನೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣ ಗೌಡ ಅವರನ್ನು ಬೆಳಗಾವಿ ಪೊಲೀಸರು ವಶಕ್ಕೆ ಪಡೆದರು.
ನಾರಾಯಣ ಗೌಡ ನೇತೃತ್ವದಲ್ಲಿ ಬೆಳಗಾವಿ ನಗರದವರೆಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಈ ಮೆರವಣಿಗೆ ಬೆಳಗಾವಿ ನಗರ ಪ್ರವೇಶಿಸುವ ಮೊದಲೇ ಟೋಲ್ ನಾಕಾ ಬಳಿ ಕಾರ್ಯಕರ್ತರನ್ನು ಪೊಲೀಸರು ತಡೆದರು.
ಇನ್ನು ಹಿರೇಬಾಗೆವಾಡಿ ಟೋಲ್ ನಾಕಾ ಬಳಿಯಲ್ಲಿ ಮಹಾರಾಷ್ಟ್ರ ನೊಂದಣಿ ಇರುವ ಲಾರಿಗಳಿಗೆ ಮಸಿ ಬಳಿದು ಗಾಜು ಒಡೆದರು. ಮಹಾರಾಷ್ಟ್ರ ನೋಂದಣಿಯ ಹತ್ತಕ್ಕೂ ಅಧಿಕ ಲಾರಿಗಳ ನಂಬರ್ ಪ್ಲೇಟ್ ಕಿತ್ತು ಹಾಕಿ ಮಸಿ ಬಳಿಯಲಾಯಿತು.
ಕೂಡಲೇ ಪ್ರತಿಭಟನಾಕಾರರನ್ನು ತಡೆದ ಪೊಲೀಸರು ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ನಾರಾಯಣ ಗೌಡ ಸೇರಿದಂತೆ ನೂರಾರು ಕಾರ್ಯಕರ್ತರನ್ನು ವಶಕ್ಕೆ ಪಡೆದರು.
ಈ ವೇಳೆ ಪೊಲೀಸ್ ವಾಹನವೇರಿದ ಕಾರ್ಯಕರ್ತರು, ರಕ್ತವನ್ನು ಚೆಲ್ಲುತ್ತೇವೆ ನ್ಯಾಯವನ್ನು ಕೇಳುತ್ತೇವೆ, ಸ್ನೇಹಕ್ಕೂ ಬದ್ಧ ಸಮರಕ್ಕೂ ಸಿದ್ಧ ಎಂದೆಲ್ಲಾ ಘೋಷಣೆಗಳನ್ನು ಕೂಗಿದರು. ಕೆಲವರು ರಸ್ತೆ ಮೇಲೆಯೇ ಮಲಗಿ ಪ್ರತಿಭಟನೆ ನಡೆಸಿದರೆ ಇನ್ನೂ ಕೆಲವರು ಪೊಲೀಸ್ ವಾಹನವೇರಿ ಕೈಯಲ್ಲಿ ಬಾವುಟ ಹಿಡಿದು ಘೋಷಣೆ ಮೊಳಗಿಸಿದರು.