ಬೆಳಗಾವಿ: ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಶಂಭುರಾಜ್ ದೇಸಾಯಿ ಭೇಟಿ ವೇಳೆ ಎಂಇಎಸ್ ಕಾರ್ಯಕರ್ತರು ನಾಡದ್ರೋಹಿ ಘೋಷಣೆ ಕೂಗಿದ್ದಾರೆ.
ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಎಂಇಎಸ್ ಮುಖಂಡರು ಘೋಷಣೆ ಕೂಗಿ ಉದ್ಧಟತನ ಮೆರೆದಿದ್ದಾರೆ.
ಮಹಾರಾಷ್ಟ್ರದ ಶಿನೋಳ್ಳಿ ಗ್ರಾಮಕ್ಕೆ ಚುನಾವಣಾ ಪ್ರಚಾರಕ್ಕೆ ಸಚಿವ ಶಂಭುರಾಜ್ ದೇಸಾಯಿ ಶುಕ್ರವಾರ ಆಗಮಿಸಿದ್ದರು. ರಾಜ್ಯದಲ್ಲಿ ಚಳಿಗಾಲದ ಅಧಿವೇಶನಕ್ಕೆ ಪ್ರತಿಯಾಗಿ ಡಿಸೆಂಬರ್ 19ರಂದು ಬೆಳಗಾವಿಯ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ಮಹಾಮೇಳಾವ್ ನಡೆಸಲು ಎಂಇಎಸ್ ನಿರ್ಧಾರ ಮಾಡಿದೆ. ಹೀಗಾಗಿ ಶಂಭುರಾಜ್ ದೇಸಾಯಿಗೆ ಸಮ್ಮೇಳನಕ್ಕೆ ಬರುವಂತೆ ಆಹ್ವಾನ ನೀಡಿದ ಎಂಇಎಸ್ ಮುಖಂಡರು, ಬೆಳಗಾವಿ, ಕಾರವಾರ, ನಿಪ್ಪಾಣಿ, ಬೀದರ್, ಬಾಲ್ಕಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಘೋಷಣೆಗಳನ್ನು ಕೂಗಿದರು.