Ad imageAd image

ಜನ ಪೀಡಕರಂತೆ ವರ್ತಿಸುವ ಡಿಕೆ ಶಿವಕುಮಾರ್: ನೀರಿನ ದರ ಏರಿಕೆಗೆ ಬಿಜೆಪಿ ಆಕ್ರೋಶ

ratnakar
ಜನ ಪೀಡಕರಂತೆ ವರ್ತಿಸುವ ಡಿಕೆ ಶಿವಕುಮಾರ್: ನೀರಿನ ದರ ಏರಿಕೆಗೆ ಬಿಜೆಪಿ ಆಕ್ರೋಶ
WhatsApp Group Join Now
Telegram Group Join Now

ಬೆಂಗಳೂರು: ನೀರಿನ ದರ ಏರಿಕೆ ಮಾಡುವ ಸಂಬಂಧ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆಗೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಟೀಕಾ ಪ್ರಹಾರ ನಡೆಸಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ ಸಂದೇಶ ಪ್ರಕಟಿಸಿರುವ ಕರ್ನಾಟಕ ಬಿಜೆಪಿ, ಮೂರು ಬಿಟ್ಟವರು ಊರಿಗೆ ದೊಡ್ಡವರು. ಡಿಕೆ ಶಿವಕುಮಾರ್ ಜನರ ಪೀಡಕರಂತೆ ವರ್ತಿಸುತ್ತಿದ್ದಾರೆ ಎಂದಿದೆ.

‘ಜನರ ಪೀಡಕರಂತೆ ವರ್ತಿಸುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಂಥವರನ್ನು ನೋಡಿಯೇ ‘ಮೂರು ಬಿಟ್ಟವರು ಊರಿಗೆ ದೊಡ್ಡವರು’ ಎನ್ನುವು ನಾಣ್ನುಡಿ ಬರೆದಂತೆ ತೋರುತ್ತಿದೆ. ದಿನಕ್ಕೊಂದು ಬೆಲೆ ಏರಿಕೆಯ ಬರೆ ಎಳೆಯುತ್ತಿರುವ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ದರ್ಪದ ಮಾತುಗಳನ್ನು ಆಡುತ್ತಲೇ ಇದೀಗ ಕುಡಿಯುವ ನೀರಿನ ಬೆಲೆ ಏರಿಕೆ ಮಾಡಿ ಬೆಂಗಳೂರಿಗರ ಜೇಬಿಗೆ ಕತ್ತರಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಬೆಂಗಳೂರಿಗೆ ಬದುಕು ಕಟ್ಟಿಕೊಳ್ಳಲು ಬಂದಿರುವ ಜನಸಾಮಾನ್ಯರು ಬೆಲೆ ಏರಿಕೆಯ ಭೂತವಾಗಿರುವ ಈ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿಯುವ ಕಾಲ ದೂರವಿಲ್ಲ’ ಎಂದು ಬಿಜೆಪಿ ಉಲ್ಲೇಖಿಸಿದೆ.

ಕಾಂಗ್ರೆಸ್​​ ಬರೀ ದರ ಏರಿಕೆಯನ್ನಷ್ಟೇ ಬೆಂಗಳೂರು ಜನಕ್ಕೆ ನೀಡಿದೆ ಎಂದು ಶಾಸಕ ಅಶ್ವತ್ಥ್ ನಾರಾಯಣ ಟೀಕಿಸಿದರು. ಬೆಂಗಳೂರಿನಲ್ಲಿ ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ ಅವರು, ಬೆಂಗಳೂರಿಗೆ ಈ ಸರ್ಕಾರ ಕೊಟ್ಟಿದ್ದು ಏನು? ಬೆಂಗಳೂರಿನವರಿಗೆ ಕೊಟ್ಟಿದ್ದು ದರ ಏರಿಕೆ, ಗುಂಡಿ ಭಾಗ್ಯ, ಅವ್ಯವಸ್ಥೆ. ರಸ್ತೆಯಲ್ಲಿ ಯಾರೂ ಓಡಾಡದಂತಹ ಪರಿಸ್ಥಿತಿ ನಿರ್ಮಿಸಿದ್ದಾರೆ. ಕಾಂಗ್ರೆಸ್ ಸರ್ಕಾರ ನೀರಿನ ದರ ಏರಿಕೆ ನಿರ್ಧಾರ ಕೈಬಿಡಬೇಕು ಎಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ಬಡ, ಮಧ್ಯಮ ವರ್ಗದ ಜನ ಹೆಚ್ಚು ಇದ್ದಾರೆ. ಜನ ಬದುಕಬೇಕಾ, ಸಾಯಬೇಕಾ, ಸರ್ಕಾರಕ್ಕೆ ಕರುಣೆ ಇಲ್ವಾ ಎಂದು ಬೆಂಗಳೂರಿನಲ್ಲಿ ಬಿಜೆಪಿ ಎಂಎಲ್​ಸಿ ರವಿಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಎಲ್ಲದರ ಬೆಲೆ ಏರಿಕೆ ಮಾಡುತ್ತಿದ್ದರೆ ಜನರು ಏನು ಮಾಡಬೇಕು? ಯಾವುದೇ ಕಾರಣಕ್ಕೂ ನೀರಿನ ದರ ಹೆಚ್ಚಳ ಮಾಡಬಾರದು. ನೀರಿನ ದರ ಏರಿಕೆ ಮಾಡಿದರೆ ಬಿಜೆಪಿ ವಿರೋಧಿಸಲಿದೆ. ನೀರಿನ ದರ ಹೆಚ್ಚಿಸಿದರೆ ಬೆಂಗಳೂರಿನ ಜನ ಶಾಪ ಹಾಕುತ್ತಾರೆ ಎಂದು ಅವರು ಹೇಳಿದ್ದಾರೆ.

WhatsApp Group Join Now
Telegram Group Join Now
Share This Article