ಚಾಮರಾಜನಗರ : ರಾಹುಲ್ ಗಾಂಧಿ ನೇತೃತ್ವದಲ್ಲಿ ದೇಶಾದ್ಯಂತ ನಡೆಸುತ್ತಿರುವ ಭಾರತ್ ಜೋಡೋ ಯಾತ್ರೆ ಇಂದು ರಾಜ್ಯಕ್ಕೆ ಆಗಮಿಸಲಿದ್ದು, ಬರಮಾಡಿಕೊಳ್ಳಲು ಕಾಂಗ್ರೆಸ್ ತಯಾರಿ ಜೋರಾಗಿದೆ. ನಾಯಕರನ್ನು ಸ್ವಾಗತಿಸಲು ರಾಜ್ಯ ಕಾಂಗ್ರೆಸ್ ನಾಯಕರು ಸರ್ವ ರೀತಿಯಲ್ಲೂ ಸಜ್ಜಾಗಿದ್ದಾರೆ.
ಇಂದು ರಾಜ್ಯ ಪ್ರವೇಶಿಸಲಿರುವ ಈ ಯಾತ್ರೆಯು ರಾಜ್ಯ ಕಾಂಗ್ರೆಸ್‌ಗೆ ಹೊಸ ಹುರುಪು ನೀಡಿದೆ. ಕಾಂಗ್ರೆಸ್ ನಾಯಕರೆಲ್ಲರೂ ಗುಂಡ್ಲುಪೇಟೆ ಪಟ್ಟಣದತ್ತ ಮುಖ ಮಾಡಿದ್ದಾರೆ.
ಈಗಾಗಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಪಟ್ಟಣದಲ್ಲಿದ್ದಾರೆ. ಇನ್ನುಳಿದ ನಾಯಕರು ಶುಕ್ರವಾರ ಮುಂಜಾನೆಯೇ ಪಟ್ಟಣಕ್ಕೆ ಬರಲಿದ್ದಾರೆ.
ಚಾಮರಾಜನಗರ ಜಿಲ್ಲೆಗೆ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಆಗಮಿಸಲಿದ್ದು, ಕಾಂಗ್ರೆಸ್ ಕಾರ್ಯಕರ್ತರು ಎಲ್ಲಾ ಸಿದ್ದತೆ ನಡೆಸಿದ್ದಾರೆ. ನಗರದ ಹಲವು ಕಡೆ ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತ್ತಿದೆ.
ತಮಿಳುನಾಡಿನ ಗೂಡಲೂರು ಕಡೆಯಿಂದ ರಾಜ್ಯ ಪ್ರವೇಶ ಮಾಡಲಿದ್ದು, ಗುಂಡ್ಲುಪೇಟೆಯ ಅಂಬೇಡ್ಕರ್ ಭವನದ ಎದುರಿನ ಖಾಸಗಿ ಜಾಗದಲ್ಲಿ ಯಾತ್ರೆಯ ವೇದಿಕೆ ಕಾರ್ಯಕ್ರಮದಲ್ಲಿ ಕನಿಷ್ಠ 25ರಿಂದ 30 ಸಾವಿರ ಮಂದಿ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ.