ಬೆಳಗಾವಿ : ಯುವಕರು ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯಮ ಸ್ಥಾಪಿಸಿ ಹತ್ತಾರು ಯುವಕರಿಗೆ ಉದ್ಯೋಗ ನೀಡುವಂತಾಗಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಆಶೀರ್ವಾದ್ ಇಂಡಸ್ಟ್ರೀಸ್ ವತಿಯಿಂದ ಚನ್ನಮ್ಮನ ಕಿತ್ತೂರಿನಲ್ಲಿ ಆರಂಭಿಸಿರುವ ಬೆಲ್ ಮಿಕ್ಸ್ ಫುಡ್ ಪ್ರಾಕ್ಟಡ್ಸ್ ನ್ನು ಬೆಳಗಾವಿಯಲ್ಲಿ ಶನಿವಾರ ಬಿಡುಗಡೆಗೊಳಿಸಿ ಮಾತನಾಡಿದ ಸಚಿವರು, ಇಂದು ಹಲವರು ಕಷ್ಟಪಟ್ಟು ಓದಿ ಶಿಕ್ಷಣ ಪಡೆದು, ಕೆಲಸ ಹುಡುಕುತ್ತಾ ಕುಳಿತುಕೊಳ್ಳುತ್ತಾರೆ. ಇದಕ್ಕೆ ಅಪವಾದ ಎಂಬಂತೆ ಇಂಜಿನಿಯರಿಂಗ್ ಪದವೀಧರರಾದ ನವೀನ್ ಮೆಳವೆಂಕಿ ಮತ್ತು ಸುಮನ್ ಮೋದಿ ಉದ್ಯೋಗಕ್ಕಾಗಿ ಕಾಯದೆ ಸ್ವತಃ ಉದ್ಯಮ ಆರಂಭಿಸಿ ಹತ್ತಾರು ಯುವಕರಿಗೆ ಉದ್ಯೋಗ ನೀಡುತ್ತಿದ್ದಾರೆ ಎಂದು ಶ್ಲಾಘಿಸಿದರು.
ಖ್ಯಾತ ಸಾರಿಗೆ ಉದ್ಯಮಿ ವಿಜಯ ಸಂಕೇಶ್ವರ್ ಅವರು ಖಾಲಿ ಕೈಯಲ್ಲಿ ಮನೆಯಿಂದ ಬಂದು ಇಂದು ರಾಷ್ಟ್ರದ ದೊಡ್ಡ ಉದ್ಯಮಿಯಾಗಿ ಬೆಳೆದಿದ್ದಾರೆ. ಸಾರಿಗೆ, ಪತ್ರಿಕೋದ್ಯಮ ಸೇರಿದಂತೆ ಹಲವು ರಂಗಗಳಲ್ಲಿ ಸಾಧನೆ ಮಾಡಿದ್ದಾರೆ , ಅಂತಹ ವ್ಯಕ್ತಿಗಳು ಸಮಾಜಕ್ಕೆ ಆದರ್ಶವಾಗಿದ್ದಾರೆ. ಈಗ ಆರಂಭಿಸಿರುವ ಉದ್ಯಮ ಯಶಸ್ವಿಯಾಗಲಿ, ಸಾವಿರಾರು ಜನರಿಗೆ ಉದ್ಯೋಗ ದೊರೆಯಲಿ ಎಂದು ಸಚಿವರು ಹಾರೈಸಿದರು.
ಈ ವೇಳೆ ಯುವ ಉದ್ಯಮಿಗಳಾದ ನವೀನ್ ಮೆಳವಂಕಿ, ಸುಮನ್ ಮೋದಿ, ಶಾಸಕ ಬಾಬಾಸಾಹೇಬ್ ಪಾಟೀಲ್, ಡಾ.ಗುರುದೇವಿ ಹುಲೆಪ್ಪನವರಮಠ್, ಜ್ಯೋತಿ ಭಾವಿಕಟ್ಟಿ, ದಿಗ್ವಿಜಯ್ ಎಸ್ ಸಿದ್ನಾಳ್, ಮೆಳವಂಕಿ ಮತ್ತು ಮೋದಿ ಕುಟುಂಬಸ್ಥರು ಸೇರಿದಂತೆ ಹಲವರು ಉಪಸ್ಥಿತರಿದ್ದರು.