ಬೆಳಗಾವಿ: ತಹಶೀಲ್ದಾರ್ ಕಚೇರಿಯಲ್ಲೇ ಎಸ್ಡಿಎ ರುದ್ರೇಶ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಎ1 ಬಸವರಾಜ ನಾಗರಾಳ, ಎ2 ಅಶೋಕ್ ಕಬ್ಬಲಿಗೇರ್ ಮತ್ತು ಮಹಿಳಾ & ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಎ3 ಸೋಮುಗೆ ಬೆಳಗಾವಿ 10ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ನಿಂದ ಜಾಮೀನು ಮಂಜೂರು ಮಾಡಲಾಗಿದೆ.
ನವೆಂಬರ್ 12ರಂದು ಆರೋಪಿಗಳ ಪರ ವಕೀಲರಿಂದ ಪ್ರತ್ಯೇಕವಾದ ಮಂಡಿಸಿದ್ದರು. ಇದಕ್ಕೆ ಖಡೇಬಜಾರ್ ಠಾಣೆ ಪೊಲೀಸರು ತಕರಾರು ಅರ್ಜಿ ಸಲ್ಲಿಸಿದ್ದರು. ಕಳೆದ 10 ದಿನಗಳಿಂದ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಮೂವರು ಆರೋಪಿಗಳಿಗೆ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಲಾಗಿದೆ. ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.
ತನ್ನ ಸಾವಿಗೆ ಕಾರಣ ಅಂತ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪಿಎ ಸೋಮು, ತಹಶಿಲ್ದಾರ್ ಬಸವರಾಜ ನಾಗರಾಳ, ಸಹೊದ್ಯೋಗಿ ಅಶೋಕ ಕಬ್ಬಲಿಗೇರ್ ಮೂರು ಜನರ ಕಾರಣವೆಂದು ತಹಶಿಲ್ದಾರ ಆಲ್ ಸ್ಟಾಪ್ ಎಂಬ ಹೆಸರಿನ ವಾಟ್ಸಪ್ ಗ್ರೂಪ್ನಲ್ಲಿ ಮೆಸೇಜ್ ಹಾಕಿ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದರು.
ಆತ್ಮಹತ್ಯೆ ಮಾಡಿಕೊಳ್ಳುವ ಹಿಂದಿನ ದಿನ ಅಂದರೆ ನವೆಂಬರ್ 4ರಂದು ಸಂಜೆ ತನ್ನ ವರ್ಗಾವಣೆ ಆದೇಶ ನೋಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅದೇ ಗ್ರೂಪ್ನಲ್ಲೇ ಮೆಸೇಜ್ ಹಾಕಿ ನ.5ರಂದು ಬೆಳಗ್ಗೆ ಏಳು ಗಂಟೆ ಸುಮಾರಿಗೆ ನೇಣು ಬಿಗಿದುಕೊಂಡು ತಹಶಿಲ್ದಾರ್ ಕೊಠಡಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು.
ಈ ಸಂದರ್ಭದಲ್ಲಿ ಮೆಸೇಜ್ ನೋಡಿಯೂ ಸಿಬ್ಬಂದಿಗಳು ಯಾಕೆ ಪೊಲೀಸರಿಗೆ ಮಾಹಿತಿ ನೀಡಿಲ್ಲ ಅಂತಾ ಖಡೇಬಜಾರ್ ಪೊಲೀಸರು ವಿಚಾರಣೆ ನಡೆಸಿದ್ದರು. ವಾಟ್ಸಪ್ ಗ್ರೂಪ್ನಲ್ಲಿ 106 ಸಿಬ್ಬಂದಿ ಇದ್ದು ಯಾರು ಕೂಡ ಆತ್ಮಹತ್ಯೆ ತಡೆಯುವ ಪ್ರಯತ್ನ ಮಾಡಿರಲಿಲ್ಲ. ಈ ಕಾರಣಕ್ಕೆ ಇತ್ತೀಗೆಚೆ ಸುಮಾರು 50ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಿಚಾರಣೆ ಮಾಡಿದ್ದರು.