ಚಿಕ್ಕೋಡಿ: ಅನೈತಿಕ ಸಂಬಂಧದಿಂದ ಹೆತ್ತ ಮಗನನ್ನು ಬಾವಿಗೆ ದೂಡಿ ಕೊಲೆ ಮಾಡಿದ ಆರೋಪದ ಮೇಲೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ್ ಕರಿಗಾರಗೆ (31) ಜೀವಾವಧಿ ಶಿಕ್ಷೆ ಮತ್ತು 7 ಸಾವಿರ ದಂಡ ವಿಧಿಸಿ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.
ಹುಕ್ಕೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 2019ರ ಅಕ್ಟೋಬರ್ 22ರಂದು ನಡೆದ ಪ್ರಕರಣದ ವಿಚಾರಣೆ ನಡೆಸಿದ ಚಿಕ್ಕೋಡಿ 7ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಎಸ್‌ಎಲ್ ಚೌಹಾಣ್ ಅವರು ಶಿಕ್ಷೆಯ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ವೈಜಿ ತುಂಗಳ ವಾದ ಮಂಡಿಸಿದರು.
ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ್ ಕರಿಗಾರ, ರಾಮಪ್ಪ ಕೆಂಚಪ್ಪ ಬಸ್ತವಾಡ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಆಕೆಯ ಹಿರಿಯ ಮಗ ಪ್ರವೀಣ್‌ಗೆ (10) ಈ ವಿಚಾರ ಗೊತ್ತಾಗಿ, ತಂದೆಗೆ ಹೇಳುತ್ತೇನೆ ಎಂದು ಓಡಿ ಹೋದಾಗ ಆತನನ್ನು ಕರೆದು 50 ರೂ. ಕೊಟ್ಟು ಅಂಗಡಿಯಿಂದ ತಿಂಡಿ ತರಲು ಹೇಳಿ ಕಳುಹಿಸಿದ್ದಳು.
ಆತನ ಜೊತೆ ಕಿರಿಯ ಮಗ ಪ್ರಜ್ವಲ್‌ನನ್ನೂ (8) ಕಳುಹಿಸಿದ್ದು, ಬಳಿಕ ಆಕೆ ಅವರ ಹಿಂದೆ ಹೋಗಿದ್ದಳು. ಬಳಿಕ ಬೆಲ್ಲದ ಬಾಗೇವಾಡಿ ಉದಯಕುಮಾರ್ ಮಲ್ಲಿನಾಥ್ ಪಾಟೀಲ್ ಎಂಬವರಿಗೆ ಸೇರಿದ ಜಮೀನಿನಲ್ಲಿರುವ ಬಾವಿಗೆ ದೂಡಿ ಪ್ರವೀಣ್‌ನನ್ನು ಕೊಲೆ ಮಾಡಿದ್ದಳು. ಇದನ್ನೆಲ್ಲಾ ಕಂಡ ಪ್ರಜ್ವಲ್‌ಗೂ ಈ ವಿಚಾರ ಬೇರೆ ಯಾರಿಗಾದರು ಹೇಳಿದರೆ ಇದೇ ರೀತಿ ನಿನ್ನನ್ನೂ ಸಾಯಿಸುವುದಾಗಿ ಬೆದರಿಕೆ ಹಾಕಿದ್ದಳು.