ರಾಜ್ಯ ಕಾಂಗ್ರೆಸ್ ಸರ್ಕಾರ ದಿಕ್ಕುತಪ್ಪಿದ ಸರ್ಕಾರವಾಗಿದೆ. ಬಹುಮತದ ಸರ್ಕಾರ 5 ವರ್ಷದ ಆಡಳಿತದ ದಿಕ್ಸೂಚಿ ಹೇಳಬೇಕಿತ್ತು. ಆದ್ರೆ, ಸರ್ಕಾರದ ಹಲವಾರು ವಿಚಾರಗಳಲ್ಲಿ ವೈಫಲ್ಯ ಮತ್ತು ಗೊಂದಲ ಇದೆ. ನಾಡಿನ ಜನರಿಗೆ ಕೊಟ್ಟ ಮಾತು ತಪ್ಪಿದೆ. ಹಣಕಾಸಿನ ವಿಚಾರದಲ್ಲಿ ರಾಜ್ಯ ಸರ್ಕಾರ ಹಳಿ ತಪ್ಪಿದೆ ಎಂದು ಬಸವರಾಜ ಬೊಮ್ಮಾಯಿ ಗುಡುಗಿದ್ದಾರೆ.
8 ಸಾವಿರ ಕೋಟಿ ರೂ. ಸಾಲ ಮಾಡಿದ್ದಾರೆ, ಎಲ್ಲಾ ತೆರಿಗೆ ಹೆಚ್ಚಿಸಿದ್ದಾರೆ. ಸಾಲ ಮತ್ತು ತೆರಿಗೆ ಮೂಲಕ 45 ಸಾವಿರ ಕೋಟಿ ಆದಾಯ ಇದ್ದರೂ 12 ಸಾವಿರ ಕೋಟಿ ರೂ. ಖೋತಾ ಬಜೆಟ್ ಮಂಡಿಸಿದ್ದಾರೆ. ಹಲವಾರು ಸಂಘ ಮತ್ತು ಸಂಸ್ಥೆಗಳ ಸಂಬಳ ಸರಿಯಾಗಿ ಆಗುತ್ತಿಲ್ಲ. ರಾಜ್ಯದಲ್ಲಿ 1 ಕಿ.ಮೀ. ರಸ್ತೆ ಕೂಡ ಕಾಂಗ್ರೆಸ್ ನಿರ್ಮಾಣ ಮಾಡಿಲ್ಲ. ಕೃಷಿ ಸೇರಿ ಹಲವು ಇಲಾಖೆಯಲ್ಲಿ ವರ್ಗಾವಣೆಯ ಸುಗ್ಗಿ ನಡೆದಿದೆ ಎಂದು ವಾಗ್ದಾಳಿ ನಡೆಸಿದರು.
ಶಿಕ್ಷಣ, ಆರೋಗ್ಯ, ಕೃಷಿಗೆ ಪ್ರೋತ್ಸಾಹ ಇಲ್ಲ. ರಾಜ್ಯದ ಅಭಿವೃದ್ಧಿ ಸಂಪೂರ್ಣ ಸ್ಥಗಿತವಾಗಿದೆ. ಓಪನ್ ಆಗಿ ಭ್ರಷ್ಟಾಚಾರ ನಡೆಯುತ್ತಿದೆ. ಮಂತ್ರಿಗಳು, ಸಿಎಂ ಕಚೇರಿ ನಡುವೆ ಭ್ರಷ್ಟಾಚಾರಕ್ಕಾಗಿ ಗಲಾಟೆ ನಡೆಯುತ್ತಿವೆ, ಬೆಂಗಳೂರು ಗ್ರಾಮೀಣ ಎಸಿ ಸೇರಿದಂತೆ ಪ್ರಮುಖ ಹುದ್ದೆಗಳ ವರ್ಗಾವಣೆಗೆ ಹರಾಜು ನಡೆಯುತ್ತಿದ್ದು ಎಂದು ಆರೋಪಿಸಿದರು.
ದೂರು ಕೊಟ್ಟವರ ಮೇಲೆಯೇ ಈ ಸರ್ಕಾರ ಕೇಸ್ ಹಾಕಿಸುತ್ತಿದೆ. ಕೆಂಪಣ್ಣ ಪ್ರಧಾನಿಗೆ ಪತ್ರ ಬರೆದರೂ ನಾವೇನೂ ಕೇಸ್ ಹಾಕಲಿಲ್ಲ. ತನಿಖೆ ಮಾಡದೇ ದೂರು ಕೊಟ್ಟವರ ಮೇಲೆಯೇ ಕ್ರಮ ತೆಗೆದುಕೊಳ್ಳುವುದು ಕಾಂಗ್ರೆಸ್ ಸರ್ಕಾರ. ಶಾಸಕ ಬಿ.ಆರ್. ಪಾಟೀಲ್ ನಕಲಿ ಪತ್ರ ಎಂದರು. ಅವರ ಶಾಸಕರೇ ತಾವು ಸಹಿ ಮಾಡಿದ್ದೇವೆ ಎಂದರು. ತನಿಖೆ ಮಾಡದೇ ಪತ್ರಕರ್ತರ ಮೇಲೆ ಪ್ರಶ್ನೆ ಮಾಡಿದರು. ಎಲ್ಲದಕ್ಕೂ ಕೇಸ್ ಹಾಕಿದರೆ ಜೈಲಿನಲ್ಲಿ ಜಾಗ ಸಾಕಾಗಲ್ಲ. ಎಲ್ಲಾ ಕ್ಲಬ್ ಗಳನ್ನು ಬಂದ್ ಮಾಡಲಾಗಿತ್ತು. ಈಗ ಮತ್ತೆ ಎಲ್ಲಾ ಓಪನ್ ಆಗಿದೆ . ಎಲ್ಲರಂದ ಮಾಮೂಲಿ ಪಡೆದು ಓಪನ್ ಮಾಡಿದ್ದಾರೆ . ಕೈಗಾರಿಕೆಗೆ ಬಂಡವಾಳ ಹೂಡಿಕೆ ಮೂರು ತಿಂಗಳಿಂದ ನಿಂತಿದೆ ಎಂದು ಕಿಡಿಕಾರಿದರು.