ಬೆಳಗಾವಿ: ಸೋಮವಾರ ಸುವರ್ಣ ಸೌಧದಲ್ಲಿ ನಡೆದ ವಿಧಾನಸಭಾ ಕಲಾಪ ಬಹುತೇಕ 15 ಗಂಟೆಗಳ ಕಾಲ ನಡೆದಿದೆ. ಬೆಳಗ್ಗೆ 10:40ಕ್ಕೆ ಆರಂಭವಾದ ಕಲಾಪ ಮಧ್ಯರಾತ್ರಿ 12.53ರವರೆಗೆ ನಡೆಯಿತು. ಮಧ್ಯ ರಾತ್ರಿ 1 ಗಂಟೆವರೆಗೆ ವರೆಗೆ ಒಟ್ಟಾಗಿ ಸ್ಪೀಕರ್ ಹಾಗೂ ಡೆಪ್ಯೂಟಿ ಸ್ಪೀಕರ್ ಕಲಾಪ ನಡೆಸಿದರು.
ಬೆಳಗಾವಿಯಲ್ಲಿ 10 ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನ ಕನ್ನಡಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ 9 ದಿನಕ್ಕೆ ಮೊಟಕುಗೊಳಿಸಲಾಗಿದೆ. ಇದರ ಜೊತೆ ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ನಿಧನದಿಂದಾಗಿ ಕಳೆದ ಮಂಗಳವಾರ ಇಡೀ ದಿನ ಸಂತಾಪ ಸೂಚನೆಗೆ ಮಾತ್ರ ಸೀಮಿತವಾಗಿತ್ತು. ಬುಧವಾರ ಸರ್ಕಾರಿ ರಜೆ ಘೋಷಣೆಯಿಂದಾಗಿ ಕಲಾಪ ನಡೆಯಲಿಲ್ಲ. ಹೀಗಾಗಿ ಅಧಿವೇಶನ 8 ದಿನಕ್ಕೆ ಇಳಿಕೆಯಾಗಿತ್ತು.
ವಿಧಾನಸಭೆಯ ಕಲಾಪವನ್ನು ಪೂರ್ಣಗೊಳಿಸುವ ಉದ್ದೇಶದಿಂದಾಗಿ ಕಳೆದ ಗುರುವಾರ ರಾತ್ರಿ 10:15ರವರೆಗೆ ನಡೆಸಲಾಗಿತ್ತು. ಸೋಮವಾರ ಈ ಅವಧಿಯನ್ನೂ ಮೀರಿ ಬೆಳಗ್ಗೆ 10: 40ಕ್ಕೆ ಆರಂಭವಾದ ಕಲಾಪ ಮಧ್ಯರಾತ್ರಿ 12:53 ವರೆಗೂ ನಡೆಸಲಾಯಿತು. ಮಧ್ಯಾಹ್ನ ಭೋಜನ ವಿರಾಮ ಮತ್ತು ಸಂಜೆ ಕಲಾಪದಲ್ಲಿ ನಡೆದ ಗದ್ದಲದಿಂದಾಗಿ 30 ನಿಮಿಷ ಕಲಾಪ ಮುಂದೂಡಿಕೆಯಾಗಿದ್ದು ಬಿಟ್ಟರೆ ದಿನದಲ್ಲಿ 12 ಗಂಟೆ ಕಲಾಪ ನಡೆಯಿತು.
ಕೆಲ ಶಾಸಕರು ಕಲಾಪದಿಂದ ಹೊರಗು ತೆರಳಲು ಮುಂದಾದಾಗ ಸ್ಪೀಕರ್ ಅರ್ಧಗಂಟೆಯಲ್ಲಿ ಮುಗಿಯುತ್ತದೆ ಎಂದು ಹೇಳಿ ಕೂರಿಸುತ್ತಿದ್ದರು. ಅಧ್ಯಕ್ಷರೇ ಬಹಳ ಸಮಯ ಆಯ್ತು ಎಂದು ಕೆಲ ಶಾಸಕರು ಹೇಳಿದಾಗ, ಕ್ರಿಕೆಟ್ ಪಂದ್ಯ ಇದ್ದಾಗ ರಾತ್ರಿಯವರೆಗೆ ನೀವು ಕುಳಿತು ವೀಕ್ಷಣೆ ಮಾಡುತ್ತೀರಿ ಅಲ್ವೇ? ಅದೇ ರೀತಿಯಾಗಿ ಇಲ್ಲೂ ಕುಳಿತುಕೊಳ್ಳಿ ಎಂದು ಹೇಳಿ ಸಮ್ಮನಾಗಿಸುತ್ತಿದ್ದರು.
ಪ್ರತಿಪಕ್ಷ ಮತ್ತು ಆಡಳಿತ ಪಕ್ಷದ ಶಾಸಕರು ಬೆಂಬಲ ನೀಡಿದ್ದರಿಂದ ಕಲಾಪ ಮಧ್ಯರಾತ್ರಿಯವರೆಗೂ ನಡೆಯಿತು.