ಬೆಳಗಾವಿ: ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಯೋಜನೆಯಡಿ ಬೆಳಗಾವಿ ಜಿಲ್ಲಾ ಪಂಚಾಯಿತಿಯಲ್ಲಿ ಖಾಲಿಯಿರುವ 1 ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ ಸಮಾಲೊಚಕ ಹುದ್ದೆಗೆ ತಾತ್ಕಾಲಿಕ ಗುತ್ತಿಗೆ/ಹೊರಗುತ್ತಿಗೆ ಆಧಾರದ ಮೇಲೆ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಕರೆಯಲಾಗಿದೆ.
ಸಮಾಲೊಚಕರು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಪರಿಸರ ವಿಜ್ಞಾನದಲ್ಲಿ ವಿಶೇಷತೆಯೊಂದಿಗೆ ಪರಿಸರ ಎಂಜಿನಿಯರಿಂಗ್ / ಸಿವಿಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿರಬೇಕು ಮತ್ತು ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 3 ವರ್ಷಗಳ ಅನುಭವ ಮತ್ತು ನೀರು, ನೈರ್ಮಲ್ಯ ಮತ್ತು ಗ್ರಾಮೀಣ ಅಭಿವೃದ್ಧಿಯಲ್ಲಿ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೆಲಸ ಮಾಡಿರಬೇಕು. ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷಗಳು ವಯೋಮಿತಿ ಮೀರಿರಬಾರದು.
ಅಭ್ಯರ್ಥಿಗಳು ಅರ್ಜಿ ನಮೂನೆಯಲ್ಲಿ ಮಾಹಿತಿಯನ್ನು ತುಂಬಿ, ವಯಸ್ಸಿನ ದೃಢೀಕರಣ, ವಿದ್ಯಾರ್ಹತೆ, ಅನುಭವ, ಪ್ರಮುಖ ಸಾಮರ್ಥ್ಯಗಳು, RESUME ಹಾಗೂ ಅರ್ಜಿ ಜೊತೆಗೆ “ನಾನು ಈ ಹುದ್ದೆಗೆ ಯಾವ ರೀತಿ ಸೂಕ್ತನಾಗಿದ್ದೇನೆ” ಎಂಬುದರ ಬಗ್ಗೆ ಒಂದು ಪುಟದಲ್ಲಿ ಟಿಪ್ಪಣಿ ಬರೆದು ಅರ್ಜಿಯನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಬೆಳಗಾವಿ ಪಿನ್ ಕೋಡ್: 590001 ಈ ವಿಳಾಸಕ್ಕೆ ಅರ್ಜಿಯ ಹಾರ್ಡ್ ಪ್ರತಿಯನ್ನು ಫೆಬ್ರುವರಿ 19 ರಂದು ಸಂಜೆ 5:30 ಗಂಟೆಯೊಳಗೆ ಸಲ್ಲಿಸಬೇಕು. ನಂತರ ಬಂದಂತಹ ಯಾವುದೇ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ. ಅರ್ಜಿಯ ನಮೂನೆಯು ಜಿಲ್ಲಾ ಪಂಚಾಯತ ವೆಬ್ ಸೈಟ್ ನಲ್ಲಿ www.zpbelagavi.kar.nic.in/ ನೇಮಕಾತಿ ಲಿಂಕ್ನಲ್ಲಿ ಲಭ್ಯವಿರುತ್ತದೆ.
ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನ/ಲಿಖಿತ ಪರೀಕ್ಷೆ ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಹಾಜರಾಗುವುದು. ನೇಮಕಾತಿಯನ್ನು ಪೂರ್ಣವಾಗಿ ಮತ್ತು ಭಾಗಶಃ ರದ್ದು ಮಾಡುವ/ ಮುಂದೂಡುವ/ ಬದಲಾವಣೆ ಮಾಡುವ ಹಕ್ಕನ್ನು ಇಲಾಖೆಯು ಹೊಂದಿರುತ್ತದೆ. ಜಿಲ್ಲಾ ಪಂಚಾಯಿತಿಯ ಹುದ್ದೆಗಳು ಜಿಲ್ಲಾಮಟ್ಟದ ಹುದ್ದೆಯಾಗಿರುವುದರಿಂದ ಆಯ್ಕೆಯಾದ ಅಭ್ಯರ್ಥಿಗಳು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ.
ಅಭ್ಯರ್ಥಿಗಳು ಸ್ನಾತಕ / ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣ ಮುಖಾಂತರ ಪಡೆದಿದ್ದರೆ, ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.