ಬೆಂಗಳೂರು: ಶಕ್ತಿ ಯೋಜನೆ.. ಮಹಿಳೆಯರ ಪ್ರಯಾಣಕ್ಕೆ ಶಕ್ತಿ ತುಂಬಿದ ಯೋಜನೆ. ಸಾವಿರಾರು ಮಹಿಳೆಯರು ಹಿಂದೆಂದೂ ನೋಡದ ಊರುಗಳನ್ನ ಕಣ್ತುಂಬಿಕೊಂಡಿದ್ದಾರೆ. ಧಾರ್ಮಿಕ ಕ್ಷೇತ್ರ, ಪ್ರವಾಸಿ ತಾಣ ಅಂತೆಲ್ಲಾ ಯೋಜನೆಯ ಸದುಪಯೋಗ ಪಡೆಸಿಕೊಂಡಿದ್ದಾರೆ. ಇನ್ನು ಕೆಲವು ನಾರಿಯರು ತಿಂಗಳ ಪ್ರಯಾಣದ ಖರ್ಚು ಉಳಿಸಿ, ಅದನ್ನೇ ಮನೆಗಾಗಿ ಬಳಸಿಕೊಳ್ತಿದ್ದಾರೆ. ಇದರ ಮಧ್ಯ ವಿದ್ಯಾರ್ಥಿಯೊಬ್ಬ ಕೇಳಿದ ಪ್ರಶ್ನೆ ಹೊಸದೊಂದು ಚರ್ಚೆ ಹುಟ್ಟುಹಾಕಿದೆ. ಹೌದು…ಪುಟ್ಟ ಪೋರನ ಪ್ರಶ್ನೆಗೆ ಡಿಸಿಎಂ ಕೊಟ್ಟ ಉತ್ತರದಿಂದಾಗಿ ಗಂಡುಮಕ್ಕಳಿಗೂ ಉಚಿತ ಬಸ್ ವ್ಯವಸ್ಥೆ ಎನ್ನುವ ಚರ್ಚೆ ಜೋರಾಗಿದೆ.
ನಿನ್ನೆ (ನವೆಂಬರ್ 15) ಮಕ್ಕಳ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅವರು ಶಾಲಾ ಮಕ್ಕಳ ಜೊತೆ ಸಂವಾದ ನಡೆಸಿದರು. ಡಿಸಿಎಂ ಡಿಕೆ, ಶಿಕ್ಷಣ ಸಚಿವ ಮಧು ಬಂಗಾರಪ್ಪ ಸೇರಿದಂತೆ ಹಲವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ 7ನೇ ತರಗತಿ ವಿದ್ಯಾರ್ಥಿಯೊಬ್ಬ ಡಿಸಿಎಂ ಎದುರು ಗ್ಯಾರಂಟಿ ಯೋಜನೆಗಳ ಬಗ್ಗೆ ಪ್ರಶ್ನೆ ಕೇಳಿದ್ದಾನೆ. ಗಂಡು ಮಕ್ಕಳಿಗಾಗಿ ಯಾವುದೇ ಯೋಜನೆ ಇಲ್ವಾ ಅನ್ನೋ ಅರ್ಥದಲ್ಲಿ, ನಮ್ಮಮ್ಮ ನನ್ನ ಬಿಟ್ಟು ಬಸ್ನಲ್ಲಿ ಓಡಾಡ್ತಿದ್ದಾರೆಂದು ಅಳಲು ತೋಡಿಕೊಂಡಿದ್ದಾನೆ.
7ನೇ ತರಗತಿ ವಿದ್ಯಾರ್ಥಿ ಚರಣ್ ಈ ಪ್ರಶ್ನೆ ಕೇಳ್ತಿದ್ದಂತೆ ಸಂವಾದ ಕಾರ್ಯಕ್ರಮದಲ್ಲಿ ನಗು ಮನೆ ಮಾಡಿತ್ತು. ಚರಣ್ಗೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಿನಗೂ ಫ್ರೀ ಬೇಕಾ ಎಂದು ಕೇಳಿದರು. ಅಲ್ಲದೇ ಸರ್ಕಾರದ ಜತೆಗೆ ಚರ್ಚೆ ಮಾಡುತ್ತೇನೆ ಎಂಬ ಭರವಸೆಯ ಮಾತುಗಳನ್ನಾಡಿದ್ರು. ಮುಂದುವರಿದು ಒಂದು ವಯೋಮಿತಿಯವರೆಗೆ ಯೋಜನೆ ಮಾಡೋಣ ಎಂದರು.
ಶಾಲಾ ವಿದ್ಯಾರ್ಥಿ ಪ್ರಶ್ನೆಯೊಂದಕ್ಕೆ ಡಿಕೆ ಶಿವಕುಮಾರ್ ನೀಡಿದ ಉತ್ತರ ಇದೀಗ ರಾಜ್ಯಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಡಿಸಿಎಂ ಡಿಕೆ ಆಡಿರೋ ಮಾತು ಮತ್ತೊಂದು ಗ್ಯಾರಂಟಿ ಯೋಜನೆ ಬರುತ್ತಾ ಎಂಬ ಸಂಶಯ ಮೂಡಿಸಿದೆ. ವಿದ್ಯಾರ್ಥಿಗಳಿಗೆ ಏನಾದರೂ ಉಚಿತ ಬಸ್ ಪ್ಲ್ಯಾನ್ ಗ್ಯಾರಂಟಿ ಜಾರಿಗೆ ತರುತ್ತಾರಾ ಎನ್ನುವ ಗುಸುಗುಸು ಚರ್ಚೆ ಶುರುವಾಗಿದೆ. ಈ ವಿಚಾರ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಗಮನಕ್ಕೆ ಬರುತ್ತಿದ್ದಂತೆಯೇ ಇದನ್ನು ತಳ್ಳಿಹಾಕಿದ್ದಾರೆ. ಪುರುಷರಿಗೆ ಉಚಿತ ಪ್ರಯಾಣ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ರಾಜ್ಯದಲ್ಲಿ ಆಗಾಗಲೇ ಗ್ಯಾರಂಟಿ ಯೋಜನೆಗಳು ಸ್ಥಗಿತವಾಗುತ್ತವೆ. ಬಹಳ ದಿನಗಳು ಉಳಿಯಲ್ಲ ಎಂಬ ಚರ್ಚೆ ಮಧ್ಯ ಪುಟ್ಟ ಪೋರ ಕೇಳಿರೋ ಪ್ರಶ್ನೆಗೆ ಡಿಸಿಎಂ ಕೊಟ್ಟ ಉತ್ತರ ಕುತೂಹಲ ಮೂಡಿಸಿದೆ.