ನವದೆಹಲಿ: ಮಹಾರಾಷ್ಟ್ರ, ಜಾರ್ಖಂಡ್ ಚುನಾವಣಾ ಪ್ರಚಾರದಲ್ಲಿ ಸಂವಿಧಾನದ ಪ್ರತಿ ಹಿಡಿದು ಮತ ಪಡೆಯಲು ಕಾಂಗ್ರೆಸ್ ನಾಯಕರು ಯತ್ನಿಸಿದರು. ಇತ್ತೀಚೆಗೆ ಆ ಸಂವಿಧಾನ ಪ್ರತಿ ಪತ್ರಕರ್ತರಿಗೆ ಸಿಕ್ಕಿತ್ತು. ತೆರೆದು ನೋಡಿದ್ರೆ ಖಾಲಿ ಪುಸ್ತಕ ಇತ್ತು. ಇತಿಹಾಸದಲ್ಲಿ ಸಂವಿಧಾನ ಹೆಸರಿನಲ್ಲಿ ಇಂತಹ ಮೋಸ ನೋಡಿರಲಿಲ್ಲ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದರು.
ಸಂವಿಧಾನ ಜಾರಿಯಾಗಿ 75 ವರ್ಷ ಪೂರೈಸಿದ ಹಿನ್ನೆಲೆ ರಾಜ್ಯಸಭೆಯಲ್ಲಿಂದು ನಡೆದ ವಿಶೇಷ ಚರ್ಚೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಈ ಚುನಾವಣೆಯಲ್ಲಿ ಚಿತ್ರವಿಚಿತ್ರ ಘಟನೆ ನೋಡಿದೆ. ಚುನಾವಣೆ ಪ್ರಚಾರದಲ್ಲಿ ಸಂವಿಧಾನದ ಪ್ರತಿ ಹಿಡಿದು ಮತ ಪಡೆಯಲು ಯತ್ನಿಸಿದರು. ಸಂವಿಧಾನ ಎಂದರೆ ವಿಶ್ವಾಸ, ಭರವಸೆ. ಇತ್ತೀಚೆಗೆ ಆ ಸಂವಿಧಾನ ಪ್ರತಿ ಪತ್ರಕರ್ತರಿಗೆ ಸಿಕ್ಕಿತ್ತು. ತೆರೆದು ನೋಡಿದ್ರೆ ಖಾಲಿ ಪುಸ್ತಕ ಇತ್ತು. ಇತಿಹಾಸದಲ್ಲಿ ಸಂವಿಧಾನ ಹೆಸರಿನಲ್ಲಿ ಇಂತಹ ಮೋಸ ನೋಡಿರಲಿಲ್ಲ, ಇವರು ಸೋಲಿಗೆ ಕಾರಣ ಏನು ಗೊತ್ತಾ? ನಕಲಿ ಸಂವಿಧಾನ ಪ್ರತಿ ತೆಗೆದುಕೊಂಡು ಓಡಾಡುತ್ತಿದ್ದರು. ಜನರು ಇದನ್ನು ಅರ್ಥ ಮಾಡಿಕೊಂಡು ಸೋಲಿಸಿದ್ದಾರೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮೀಸಲಾತಿ ವಿರೋಧಿ ಪಕ್ಷ. ಓಬಿಸಿಗಳಿಗೆ ಮೀಸಲಾತಿ ನೀಡಲು ಕಾಕಾ ಸಾಹೇಬ್ ಕಾಲೇಲ್ಕರ್ ಸಮಿತಿ ರಚನೆ ಮಾಡಲಾಯಿತು. ಅದರ ವರದಿ ಎಲ್ಲಿದೆ? ನಾನು ಹುಡುಕಿದೆ ಎಲ್ಲೂ ಇಲ್ಲ. ಈಗ ಲೈಬ್ರರಿಯಲ್ಲಿದೆ ಎನ್ನುತ್ತಿದ್ದಾರೆ. ಓಬಿಸಿಗೆ ಮೀಸಲಾತಿ ನೀಡುವ ಪ್ರಸ್ತಾಪ ಕಾಂಗ್ರೆಸ್ ಲೈಬ್ರರಿಯಲ್ಲಿದೆ. ಈ ವರದಿ ಜಾರಿಯಾಗಿದ್ದರೆ ಮಂಡಲ ಕಮಿಷನ್ ವರದಿ ಜಾರಿ ಮಾಡುವ ಅಗತ್ಯ ಇರಲಿಲ್ಲ ಎಂದರು.
ರಾಜೀವ್ ಗಾಂಧಿ ಮಂಡಲ್ ಕಮಿಷನ್ ವಿರೋಧಿಸಿದ್ದರು. ಓಬಿಸಿಗೆ ಮೀಸಲಾತಿ ನೀಡಲು ವಿರೋಧಿಸಿದರು, ಈಗ ಮೀಸಲಾತಿ ಹೆಚ್ಚಿಸುವುದಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ. 50% ಮೀಸಲಾತಿ ಹೆಚ್ಚಿಸುವುದಾಗಿ ಕಾಂಗ್ರೆಸ್ ಹೇಳಿದೆ. ಧರ್ಮದ ಆಧಾರದ ಮೇಲೆ ಎರಡು ರಾಜ್ಯಗಳಲ್ಲಿ ಮೀಸಲಾತಿ ಜಾರಿ ಇದೆ. ಎರಡು ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿದೆ. ಈಗ 50%ಗಿಂತ ಹೆಚ್ಚು ಮೀಸಲಾತಿ ಹೆಚ್ಚಿಸಿ ಮುಸ್ಲಿಂ ಸಮುದಾಯಕ್ಕೆ ಮೀಸಲಾತಿ ನೀಡಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ. ಆದ್ರೆ ಇದು ಬಿಜೆಪಿ ಇರುವವರೆಗೂ ಇದು ಸಾಧ್ಯವಿಲ್ಲ ಎಂದು ಅಮಿತ್ ಶಾ ಶಪಥ ಮಾಡಿದ್ದಾರೆ.