ಬೆಳಗಾವಿ: ಉಗ್ರ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಮೋಸ್ಟ್ ವಾಂಟೆಡ್ ಉಗ್ರ ಅಫ್ಸರ್ ಪಾಷಾನನ್ನು ಮಹಾರಾಷ್ಟ್ರದ ನಾಗ್ಪುರ ಜೈಲಿನಿಂದ ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಸೋಮವಾರ ರಾತ್ರಿ ಶಿಫ್ಟ್ ಮಾಡಲಾಗಿದೆ.
ಕೇಂದ್ರ ಸಚಿವ ನಿತೀನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಮಾಡಿ 100 ಕೋಟಿ ರೂ. ಬೇಡಿಕೆಯಿಟ್ಟಿದ್ದ ಆಸಾಮಿ ಈತ. ಬೆಳಗಾವಿಯ ಹಿಂಡಲಗಾ ಜೈಲಿನಿಂದ ಜ.14 2023ರಂದು ನಾಗ್ಪುರದಲ್ಲಿರುವ ಸಚಿವ ಗಡ್ಕರಿ ಕಚೇರಿಗೆ ಫೋನ್ ಮಾಡಿ ಇಬ್ಬರು ಕೈದಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಇಬ್ಬರನ್ನೂ ವಶಕ್ಕೆ ಪಡೆದುಕೊಂಡು ಮಹಾರಾಷ್ಟ್ರದ ನಾಗ್ಪುರ ಠಾಣೆ ಪೊಲೀಸರು ಕರೆದೊಯ್ದಿದ್ದರು. ಇಷ್ಟು ದಿನ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿದ್ದ ಅಫ್ಸರ್ ಪಾಷಾನನ್ನು ಮತ್ತೆ ಈಗ ಬೆಳಗಾವಿಗೆ ಶಿಫ್ಟ್ ಮಾಡಲಾಗಿದೆ.
ಸೋಮವಾರ ರಾತ್ರಿ ನಾಗ್ಪುರದಿಂದ ಅಫ್ಸರ್ ಪಾಷಾನನ್ನು ವಿಮಾನದ ಮೂಲಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಕರೆ ತಂದ ಪೊಲೀಸರು, ಬಿಗಿ ಪೊಲೀಸ್ ಭದ್ರತೆಯಲ್ಲಿ ರಸ್ತೆ ಮಾರ್ಗವಾಗಿ ಹಿಂಡಲಗಾ ಜೈಲಿಗೆ ರವಾನಿಸಿದ್ದಾರೆ. ಡಿ.15 2005ರಂದು ಬೆಂಗಳೂರಿನ ಇಂಡಿಯನ್ ಇನ್ಸಿ÷್ಟಟ್ಯೂಟ್ ಆಫ್ ಸೈನ್ಸ್ ಸ್ಫೋಟ ಪ್ರಕರಣದಲ್ಲಿ ಅಫ್ಸರ್ ಪಾಷಾ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾನೆ. ಅಲ್ಲದೇ ಪಿಎಫ್‌ಐ ಸಂಘಟನೆ ಜೊತೆಗೆ ನಂಟಿರುವ ಜಯೇಶ ಪೂಜಾರಿ ಜೊತೆಗೆ ಸೇರಿಕೊಂಡು ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಕರೆ ಮಾಡಿದ್ದ. ಅಫ್ಸರ್ ಪಾಷಾ ಮತ್ತು ಜಯೇಶ್ ಪೂಜಾರಿ ಇಬ್ಬರೂ ಹಿಂಡಲಗಾ ಜೈಲಿನಲ್ಲಿದ್ದುಕೊಂಡೇ ಈ ಖತರ್ನಾಕ್ ಪ್ಲಾನ್ ಮಾಡಿದ್ದರು.