ಸವದತ್ತಿ/ರಾಮದುರ್ಗ: ಭಾರತ ಜೋಡೋ ಪಾದಯಾತ್ರೆ ಮೂಲಕ ಸುಭದ್ರ ದೇಶ ಕಟ್ಟುವ ಕಾಂಗ್ರೆಸ್ ನ ಮಹೋದ್ದೇಶ ಯಶಸ್ವಿಯಾಗಿ ಈಡೇರುವ ನಿಟ್ಟಿನಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಕರೆಯಿತ್ತರು.
ಸವದತ್ತಿಯಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ ಮಹತ್ವಾಕಾಂಕ್ಷೆಯ ಭಾರತ ಜೋಡೋ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಾಂಗ್ರೆಸ್ ಪಕ್ಷ ತನ್ನದೇ ಆದ ಸಿದ್ಧಾಂತಗಳ ಮೂಲಕ ಈ ಪಾದಯಾತ್ರೆಯನ್ನು ಕೈಗೊಂಡಿದೆ. 70-80 ವರ್ಷಗಳಿಂದ ಕಾಂಗ್ರೆಸ್ ಪಕ್ಷ ದೇಶಕ್ಕೆ ಕೊಟ್ಟಂತಹ ಕೊಡುಗೆಗಳನ್ನು ಜನರಿಗೆ ತಿಳಿಸುತ್ತಾ ದೇಶದ ಉದ್ದಗಲಕ್ಕೂರಾಹುಲ್ ಗಾಂಧಿಯವರ ನೇತೃತ್ವದಲ್ಲಿ ಈ ಪಾದಯಾತ್ರೆ ಸಾಗುತ್ತಿದೆ. ಇದಕ್ಕೆ ಹೆಚ್ಚಿನ ಜನಬೆಂಬಲ ದೊರೆಯುವಂತೆ ಕಾರ್ಯಕರ್ತರು ಶ್ರಮಿಸಬೇಕಿದೆ ಎಂದು ಅವರು ಹೇಳಿದರು.
ಸಭೆಯಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಆರ್.ವಿ. ಪಾಟೀಲ, ಪಂಚನಗೌಡ ದ್ಯಾಮನಗೌಡರ, ವಿನಯ ನಾವಲಗಟ್ಟಿ, ದಯಾನಂದ ಪಾಟೀಲ, ಡಿ.ಡಿ. ಟೋಪೋಜಿ, ಮಹಾಂತೇಶ ಮತ್ತಿಕೊಪ್ಪ, ವಿಶ್ವಾಸ ವೈದ್ಯ, ಶಿವಾ ಶಿಂತ್ರಿ, ಲಕ್ಕಪ್ಪ ಸವದತ್ತಿ, ಲಕ್ಕನ್ನವರ, ಕಲ್ಪನಾ ಜೋಶಿ ಹಾಗೂ ಪಕ್ಷದ ಹಿರಿಯರು ಉಪಸ್ಥಿತರಿದ್ದರು.
ಇನ್ನು ರಾಮದುರ್ಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಭಾರತ ಜೋಡೋ ಪಾದಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ್ದ ಚನ್ನರಾಜ ಹಟ್ಟಿಹೊಳಿ, ಸೆಪ್ಟೆಂಬರ್ 30ರಿಂದ ರಾಜ್ಯದಲ್ಲಿ ಆರಂಭವಾಗಲಿರುವ ಐತಿಹಾಸಿಕ ಭಾರತ ಐಕ್ಯತಾ ಯಾತ್ರೆ ಸಾಂಸ್ಕೃತಿಕ ನಗರಿ ಮೈಸೂರಿನ ಮೂಲಕ ಸಾಗಲಿದೆ, ಈಗಾಗಲೇ ಈ ಯಾತ್ರೆ ಯಶಸ್ವಿಯಾಗಿ ಮುನ್ನುಗುತ್ತಿದ್ದು, ರಾಜ್ಯದ ಎಲ್ಲ ಜನರು ಈ ಯಾತ್ರೆಯ ಬಗ್ಗೆ ಕಾತುರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ, ಮಾಜಿ ಶಾಸಕ ಅಶೋಕ ಪಟ್ಟಣ, ದಯಾನಂದ ಪಾಟೀಲ, ವಿನಯ ನಾವಲಗಟ್ಟಿ, ಸವದತ್ತಿ ಕಾಂಗ್ರೆಸ್ ಮುಖಂಡ ವಿಶ್ವಾಸ ವೈದ್ಯ ರಾಮದುರ್ಗ ಕ್ಷೇತ್ರದ ಎಲ್ಲ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.