ಯಾದಗಿರಿ: ಮನೆಯ ಮುಂದೆ ಕೊಳಚೆ ನೀರು ಹರಿಸುವ ವಿಚಾರಕ್ಕೆ ಅಕ್ಕ ಪಕ್ಕದ ಮನೆಯವರ ನಡುವೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಎಳೆದಾಡಿದ್ದಕ್ಕೆ ಮನನೊಂದು ಮಹಿಳೆಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ ಸುರಪುರದ ಕುಚಕನೂರಿನಲ್ಲಿ ನಡೆದಿದೆ.
ವಿಜಯಲಕ್ಷ್ಮಿ (30) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದು ಬಂದಿದೆ. ಮಹಿಳೆ ಆತ್ಮಹತ್ಯೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ಹಾಗೂ ಮಹಿಳೆಯ ಕುಟುಂಬಸ್ಥರು ಆಕೆಯ ಶವವನ್ನು ಹುಣಸಗಿ ಪೊಲೀಸ್ ಠಾಣೆಯ ಮುಂದಿಟ್ಟು ಪ್ರತಿಭಟಿಸಿದ್ದಾರೆ. ಈ ವೇಳೆ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಮಹಿಳೆಯ ಪಕ್ಕದ ಮನೆಯವರ ನಡುವೆ ಆಗಾಗ ಕಸ ಹಾಗೂ ಕೊಳಚೆ ನೀರಿನ ವಿಚಾರಕ್ಕೆ ಗಲಾಟೆ ನಡೆಯುತ್ತಿತ್ತು. ಇತ್ತೀಚೆಗೆ ಮನೆ ಮುಂದೆ ನೀರು ಬಿಟ್ಟ ವಿಚಾರಕ್ಕೆ ಎರಡೂ ಕುಟುಂಬದ ನಡುವೆ ಜಗಳ ನಡೆದಿತ್ತು. ಈ ವೇಳೆ ವ್ಯಕ್ತಿಯೊಬ್ಬ ಮಹಿಳೆಯ ಸೀರೆ ಹಿಡಿದು ಎಳೆದಾಡಿದ್ದಾನೆ ಎಂದು ಆರೋಪಿಸಲಾಗಿದೆ. ಇದರಿಂದ ಮಹಿಳೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.