ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿರುವ ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು ಮಧ್ಯರಾತ್ರಿಯಿಂದಲೇ ಬಂದ್ ಬಿಸಿ ಶುರುವಾಗಿದೆ. ಆಟೋ, ಟ್ಯಾಕ್ಸಿ, ಗೂಡ್ಸ್, ಖಾಸಗಿ ಬಸ್ ಸೇರಿ ವಿವಿಧ ಮಾದರಿಯ ಖಾಸಗಿ ಸಾರಿಗೆಯ ವಾಹನಗಳು ರಸ್ತೆಗೆ ಇಳಿಯುತ್ತಿಲ್ಲ. ಇಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆಯನ್ನು ಒಕ್ಕೂಟ ಆಯೋಜಿಸಿದೆ.
ಬಂದ್ ಯಶಸ್ಸಿಗಾಗಿ ಖಾಸಗಿ ಸಾರಿಗೆ ಒಕ್ಕೂಟ ಪಣತೊಟ್ಟಿದೆ. ಬೆಂಗಳೂರಿನ ಕಲಾಸಿಪಾಳ್ಯ ಖಾಸಗಿ ಬಸ್ ನಿಲ್ದಾಣದ ಒಂದರಲ್ಲೇ 250ಕ್ಕೂ ಹೆಚ್ಚು ಬಸ್ ಸ್ತಬ್ದವಾಗಲಿದೆ. ಕೇವಲ ಬೆಂಗಳೂರು ಮಾತ್ರವಲ್ಲದೇ ನೆರೆಯ ಜಿಲ್ಲೆಗಳ ಖಾಸಗಿ ಬಸ್ ಮಾಲೀಕರು ಬಂದ್‌ಗೆ ಬೆಂಬಲ ಸೂಚಿಸಿದ್ದಾರೆ.
ಬಂದ್‌ಗೆ ಒಲಾ ಚಾಲಕರು ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಲಾ ಜೋನ್ಗೆ ಟ್ಯಾಕ್ಸಿಗಳು ಬಂದಿಲ್ಲ. ಇನ್ನು ಟ್ಯಾಕ್ಸಿಗಳಿಗಾಗಿ ಜನರು ಕಾದು ಕುಳಿತಿದ್ದಾರೆ. ಬೆರಳಿಕೆಯಷ್ಟು ಟ್ಯಾಕ್ಸಿ ಚಾಲಕರು ಮಾತ್ರ ಆಗಮಿಸಿದ್ದಾರೆ.
ಕೆಎಸ್ಟಿಡಿಸಿ ಟ್ಯಾಕ್ಸಿ ಓಡಾಟ ಹಿನ್ನಲೆಯಲ್ಲಿ ಕಾರ್ಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಏರ್ಪೋರ್ಟ್ ರಸ್ತೆಯ ಚಿಕ್ಕಜಾಲ ಬಳಿ ತಡರಾತ್ರಿ ಘಟನೆ ನಡೆದಿದೆ. ಖಾಸಗಿ ಸಾರಿಗೆ ಒಕ್ಕೂಟ ಪ್ರತಿಭಟನೆ ಹಿನ್ನಲೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕಾರಿಗೆ ಕಲ್ಲು ತೂರಲಾಗಿದೆ. ಕಲ್ಲು ತೂರಿದ ಹಿನ್ನೆಲೆಯಲ್ಲಿ ಕಾರಿನ ಗ್ಲಾಸ್ ಪುಡಿಪುಡಿಯಾಗಿದೆ. ಸದ್ಯ ಚಿಕ್ಕಜಾಲ ಪೋಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಖಾಸಗಿ ಸಾರಿಗೆ ಒಕ್ಕೂಟದಿಂದ ಬೆಂಗಳೂರು ಬಂದ್ ಇದ್ದರೂ ಬೆಂಗಳೂರು-ಹೊಸೂರು ಮುಖ್ಯ ರಸ್ತೆಯಲ್ಲಿ ಎಂದಿನಂತೆ ವಾಹನಗಳ ಓಡಾಟ ನಡೆಯುತ್ತಿದೆ. ಎಲೆಕ್ಟ್ರಾನಿಕ್ ಸಿಟಿ ಸಮೀಪದ ಬೊಮ್ಮಸಂದ್ರದಲ್ಲಿ ಖಾಸಗಿ ವಾಹನಗಳ ಸಂಚರಿಸುತ್ತಿವೆ.