ಬೆಂಗಳೂರು: ಶಾಸಕ ಬಸನಗೌಡ ಯತ್ನಾಳ್‌ಗೆ 24ನೇ ಎಸಿಎಂಎಂ ಕೋರ್ಟ್ (ACMM Court) ಜಾಮೀನು ರಹಿತ ವಾರೆಂಟ್ (Non-Bailable warrant ) ಜಾರಿ ಮಾಡಿದೆ
ದಿನೇಶ್ ಗುಂಡೂರಾವ್ (Dinesh Gundu Rao) ಕುಟುಂಬದ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಯತ್ನಾಳ್ ವಿರುದ್ಧ ದಿನೇಶ್‌ಗುಂಡೂರಾವ್ ಪತ್ನಿ ಟಬು ರಾವ್ ಮಾನನಷ್ಟ ಮೊಕದ್ದಮೆ ಕೇಸ್ ದಾಖಲಿಸಿದ್ದರು.
ಟಬಸ್ಸುಮ್ ರಾವ್ ಸಲ್ಲಿಸಿದ್ದ ಖಾಸಗಿ ದೂರನ್ನು ಆಗಸ್ಟ್ 29 ರಂದು ಪುರಸ್ಕರಿಸಿದ್ದ ಕೋರ್ಟ್ ಅ.16 ರಂದು ವಿಚಾರಣೆಗೆ ಖುದ್ದು ಹಾಜರಾಗುವಂತೆ ಯತ್ನಾಳ್‌ಗೆ ಸಮನ್ಸ್ ಜಾರಿಗೊಳಿಸಿತ್ತು. ಆದರೆ ಯತ್ನಾಳ್ ಇಂದು ವಿಚಾರಣೆಗೆ ಗೈರಾದ ಹಿನ್ನೆಲೆಯಲ್ಲಿ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 28ಕ್ಕೆ ಮುಂದೂಡಿದೆ.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣ ಸಂಬಂಧ ಎನ್‌ಐಎ ಅಧಿಕಾರಿಗಳು ಬಿಜೆಪಿ ಕಾರ್ಯಕರ್ತನ ವಿಚಾರಣೆ ನಡೆಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ದಿನೇಶ್ ಗುಂಡೂರಾವ್ ಬಿಜೆಪಿಯನ್ನು ಟೀಕಿಸಿದ್ದರು.
ದಿನೇಶ್ ಗುಂಡೂರಾವ್ ಬಿಜೆಪಿಯನ್ನು ಟೀಕಿಸಿದ್ದಕ್ಕೆ ವಿಜಯಪುರದಲ್ಲಿ ಏಪ್ರಿಲ್ 6 ರಂದು ಸುದ್ದಿಗಾರರ ಜತೆ ಮಾತನಾಡಿದ್ದ ಶಾಸಕ ಯತ್ನಾಳ್, ದಿನೇಶ್ ಗುಂಡೂರಾವ್ ಅವರ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.