ಬಾಗಲಕೋಟೆ : ಸಣ್ಣ ಭೂಮಿಯಲ್ಲಿ ಉತ್ತಮ ಆದಾಯ ಪಡೆಯುವುದು ತೀರಾ ಕಡಿಮೆ ಅನ್ನುವ ಮಾತು ರೈತರಲ್ಲಿದೆ. ಅದೇ ಚಿಕ್ಕ ಭೂಮಿಯಲ್ಲಿ ಉತ್ತಮ ಆದಾಯ ಪಡೆದು ಯಶ್ವಸಿಯಾದವರ ಸಂಖ್ಯೆಯೂ ಕಡಿಮೆ ಇಲ್ಲ.
ಹೀಗೆ ಒಂದು ಏಕರೆ ಭೂಮಿಯಲ್ಲಿ ಏನು ಆದಾಯ ಬರುತ್ತೆ, ಕೆಲಸಕ್ಕೆ ಬರುವ ಕೆಲಸಗಾರರಿಗೆ ಸಾಲುವುದಿಲ್ಲ ಎಂದು ಸುಮ್ಮನಾಗಿದ್ದ ರೈತ ಬಸಪ್ಪ ಗಂಜಿಹಾಳ,ಒಂದು ಎಕರೆ ಭೂಮಿಯಲ್ಲಿ ಬದನೆಕಾಯಿ , ಮೆಣಸಿನಕಾಯಿ ಸೇರಿ ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿ ಬೆಳೆದು ಸುಮ್ಮನಾಗುತ್ತಾನೆ.
ಎಂಟು ಜನವಿರುವ ತಮ್ಮ ಕುಟುಂಬಕ್ಕೆ ಸಾಕಾಗಿ ಉಳಿದ ತರಕಾರಿಯನ್ನು ದಲ್ಲಾಳರ ಮೂಲಕ ಮಾರಾಟ ಮಾಡುತ್ತಿದ್ದರು. ಹೀಗೆ ಸಾಗಿದ ಕುಟುಂಬಕ್ಕೆ ಬರ ಸಿಡಿಲೊಂದು ಬಡದಿತ್ತು. ಬದನೆಕಾಯಿ ಹುಳು ಹತ್ತಿ ಸಂಪೂರ್ಣ ನಾಶವಾಗಿ ಹೋಗಿತ್ತು. ಇದರಿಂದ ರೈತ ಬಸಪ್ಪ ಕುಟುಂಬ ಕಂಗಾಲಾಗಿತ್ತು. ಹೀಗೆ ಸುಮ್ಮನೆ ಕುಳಿತರೇ ಕೆಲಸವಾಗದು ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಭೇಟಿಯಾಗಿ ನಡೆದ ಸಂಗತಿ ಬಗ್ಗೆ ತಿಳಿಸಿದರು.
ಅಧಿಕಾರಿಗಳು ನರೇಗಾ ಯೋಜನೆಯಡಿ ಇರುವ ಹಲವು ಯೋಜನೆಗಳ ಬಗ್ಗೆ ಸವಿಸ್ತಾರವಾಗಿ ತಿಳಿಸಿದ್ದರು. ಆಗ ರೈತ ಬಸಪ್ಪ , ವೀಳ್ಯೆದೆಲೆ ಬೆಳೆಯಲು ತೀರ್ಮಾನಿಸಿದರು. ತೋಟಗಾರಿಕಾ ಇಲಾಖೆಯ ಸಲಹೆ, ಸೂಚನೆಗಳನ್ನು ಪಡೆದುಕೊಂಡು ವೀಳ್ಯೆದೆಲೆ ಬೆಳೆದರು.
ತಾವು ಅಂದುಕೊಂಡದಿಕ್ಕಿಂತ ಉತ್ತಮ ರೀತಿಯಲ್ಲಿ ಫಲ ಕೊಟ್ಟಿತ್ತು. ತಿಂಗಳಿಗೆ ಎಲ್ಲಾ ಖರ್ಚು ವೆಚ್ಚ ತೆಗೆದು ತಿಂಗಳಿಗೆ ಕನಿಷ್ಠ 20 ಸಾವಿರ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಸಣ್ಣ ಭೂಮಿಯಲ್ಲಿ ಉತ್ತಮ ಆದಾಯ ಬರುದಿಲ್ಲ ಅನ್ನುವವರಿಗೆ ರೈತ ಬಸಪ್ಪ ಸೆಡ್ಡು ಹೊಡೆದು ಒಂದು ಎಕರೆ ಭೂಮಿಯಲ್ಲಿ ಉತ್ತಮ ಆದಾಯ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಾತನಾಡಿರುವ ರೈತ ಬಸಪ್ಪ ಅವರು , ಖರ್ಚು ವೆಚ್ಚ , ಕೆಲಸಗಾರರ ವೆಚ್ಚ ಜಾಸ್ತಿಯಾಗುತ್ತೆ, ಕುಟುಂಬದವರೇ ನಿರ್ವಹಣೆ ಮಾಡಿದರೇ ಉತ್ತಮ ಆದಾಯ ಪಡೆಯಬಹುದು ಎನ್ನುತ್ತಾರೆ. ನಮ್ಮ ಕುಟುಂಬಕ್ಕೆ ವೀಳ್ಯೆದೆಲೆ ಫಲ ಉತ್ತಮ ಆದಾಯವನ್ನು ಕೊಟ್ಟಿದೆ.ಈಗಲೂ ಕೋಡುತ್ತಿದೆ. ನರೇಗಾ ನಮ್ಮ ಜೀವನಕ್ಕೆ ಅನಕೂಲವಾಗಿದೆ ಎಂದರು.