ಬಾಗಲಕೋಟೆ : ಕಳೆದ ಬಾರಿ ನುಗ್ಗಿದ ಪ್ರವಾಹದಿಂದ ಉತ್ತರ ಕರ್ನಾಟಕದ ಸಾವಿರಾರು ಕುಟುಂಬಗಳು ಬೀದಿ ಪಾಲಾಗಿವೆ. ಒಂದು ಹೊತ್ತು ಊಟ ಮಾಡಿ, ಗುಡಿ ಗುಂಡಾರಗಳಲ್ಲಿ ಚಿಕ್ಕ ಮಕ್ಕಳನ್ನು ಕಟ್ಟಿಕೊಂಡು ಜೀವನ ಸಾಗಿಸಿದ್ದಾರೆ.
ಇನ್ನು ಬೆಳೆದ ಬೆಳೆಯಂತು ಅಕ್ಷರಶಃ ಕೊಚ್ಚಿಕೊಂಡು ಹೋಗಿದೆ. ತಾವು ಕಷ್ಟಪಟ್ಟು ಬೆವರು ಹರಿಸಿ ಬೆಳೆದ ಬೆಳೆ ಕಣ್ಣ ಮುಂದೆ ನೀರುಪಾಲದ ಸ್ಥಿತಿಯನ್ನು ಕಂಡು ಎಂತಹ ವ್ಯಕ್ತಿಯೂ ನಿಂತಲ್ಲೇ ಕುಸಿದು ಹೋಗಿರುತ್ತಾನೆ.
ಅಂತಹದೇ ಪರಿಸ್ಥಿತಿಯನ್ನು ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಗೂರ ಗ್ರಾಮದ ರೈತ ಸಂಗಪ್ಪ ಚಂದ್ರಪ್ಪ ರೇವಡಿ ಅನುಭವಿಸಿದ್ದರು.
ತೋಟಗಾರಿಕಾ ಇಲಾಖೆ ಸಹಕಾರದಿಂದ ನರೇಗಾ ಯೋಜನೆಯಡಿ ಆಗಷ್ಟೆ ನಾಟಿ ಮಾಡಿದ ಪೇರಳ ಸಸಿಗಳು ನೀರಲ್ಲಿ ನಿಂತಿದ್ದವು. ರೈತ ಸಂಗಪ್ಪ ಅಕ್ಷರಶಃ ಕುಸಿದು ಹೋಗಿದ್ರು.
1 ಏಕರೆ 20 ಗುಂಟೆಯಲ್ಲಿ ಇಡಿ ಕುಟುಂಬವೇ ಬೆವರು ಹರಿಸಿ ಬೆಳೆದ ಬೆಳೆ ಇನ್ನೇನು ಕೈಗೆ ಬರುವ ಹೊತ್ತಿಗೆ ಪ್ರವಾಹ ರಕ್ಕಸನಂತೆ ಬಂದು ನಿಂತಿತ್ತು. ಇಡಿ ಕುಟುಂಬವೇ ಕಂಗಾಲಾಗಿ ಹೋಗಿತ್ತು.
ಆದರೇ ರೈತ ಸಂಗಪ್ಪ ಕುಟುಂಬ ಸುಮ್ಮನೆ ಕೂಡಲಿಲ್ಲ , ಪ್ರವಾಹ ತಗ್ಗಿದ ನಂತರ ಇಡಿ ಭೂಮಿಯನ್ನು ನಿರ್ವಹಣೆ ಮಾಡಿ, ತೋಟಗಾರಿಕೆ ಇಲಾಖೆ ಮಾರ್ಗದರ್ಶನದಿಂದ ಮೊದಲಿನಂತೆ ಪೇರಲ ಗಿಡಗಳನ್ನು ಪೋಷಿಸಿದರು.
ಪೇರಳ ತಾವು ಅಂದುಕೊಂಡಂತೆ ಉತ್ತಮ ಇಳುವರಿ ನೀಡಿತ್ತು. ಒಂದು ಹಣ್ಣು ಕೈತುಂಬುವಷ್ಟು ಬೆಳೆದಿದೆ. ಇದರಿಂದ ತಾವು ಹಾಕಿದ ಶ್ರಮಕ್ಕೆ ತಕ್ಕಂತೆ ಉತ್ತಮ ಆದಾಯ ಪಡೆಯುತ್ತಿದ್ದಾರೆ. ನರೇಗಾ ಯೋಜನೆಯಡಿ ತೋಟಗಾರಿಕೆ ಇಲಾಖೆ ಸಹಕಾರದಿಂದ ರೈತ ಕುಟುಂಬ ನೆಮ್ಮದಿ ಜೀವನ ನಡೆಸುತ್ತಿದ್ದಾರೆ.
ಪೇರಳ ಗಿಡಗಳನ್ನು ಈಗಲೂ ಚಿಕ್ಕಮಕ್ಕಳಂತೆ ಪೋಷಿಸುತ್ತಿದ್ದಾರೆ. ನರೇಗಾ ಯೋಜನೆಯಿಂದ ಇಂತಹ ಸಾವಿರಾರು ಕುಟುಂಬ ಉತ್ತಮ ಆದಾಯ ಹಾಗೂ ನೆಮ್ಮದಿ ಜೀವನ ನಡೆಸುತ್ತಿದ್ದಾರೆ. ನರೇಗಾ ನಂಬಿದ್ರೆ ಜೀವನ ನೆಮ್ಮದಿಯಿಂದ ಇರುತ್ತೆ ಅನ್ನೊದಕ್ಕೆ ಇಂತಹ ಕುಟುಂಬಗಳೇ ಸಾಕ್ಷಿ.