ಹುಬ್ಬಳ್ಳಿ: ಮಿತಿಮೀರಿದ ಕುಡಿತ ಮನುಷ್ಯನನ್ನು ಮೃಗವಾಗಿಸುತ್ತದೆ ಎನ್ನುವುದಕ್ಕೆ ಹುಬ್ಬಳ್ಳಿ ತಾಲ್ಲೂಕಿನ ಧಾರುಣ ದೃಶ್ಯವೊಂದು ಸಾಕ್ಷಿಯಾಗಿದೆ. ಬೆಳ್ಳಂ ಬೆಳಿಗ್ಗೆ ಎದ್ದು ಆಟವಾಡಬೇಕಿದ್ದ ಮುದ್ದು ಮಕ್ಕಳು ಅಪ್ಪನ ನಿಶೆಯಿಂದ ರಕ್ತದ ಮಡುವಿನಲ್ಲಿ ಹೆಣವಾಗಿ ಬೀಳುವಂತಾಗಿದೆ. ಗಂಡನೊಬ್ಬ ಕುಡಿದ ಮತ್ತಿನಲ್ಲಿ ಹೆಂಡತಿ ಹಾಗೂ ಮೂವರು ಮಕ್ಕಳ ಮೇಲೆ ಕೊಡಲಿ, ಸುತ್ತಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿ ತಾನು ಕೂಡ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಸುಳ್ಳ ಗ್ರಾಮದಲ್ಲಿ ಬುಧವಾರ ಬೆಳಗಿನ ಜಾವ ನಡೆದಿದೆ.
ಸುಳ್ಳ ಗ್ರಾಮದ ಪಕ್ಕೀರಪ್ಪ ಮಾದರ ಎಂಬಾತ ಇಂದು ಬೆಳಗಿನ ನಾಲ್ಕು ಗಂಟೆ ಸುಮಾರಿಗೆ ಮನೆಯಲ್ಲಿನ ಟಿವಿ ಸೌಂಡ್ ಜಾಸ್ತಿ ಮಾಡಿ ಮಾರಕಾಸ್ತ್ರದಿಂದ ಹೆಂಡತಿ ಮುದಕವ್ವನ ಮೇಲೆ ಹಲ್ಲೆ ನಡೆಸಿದಾಗ ಜೋರಾಗಿ ಕಿರುಚಿದ್ದಾಳೆ.
ಆಗ ಮಲಗಿದ್ದ ಮೂರು ಮಕ್ಕಳು ಎದ್ದು ಅಳಲು ಶುರು ಮಾಡಿದಾಗ ಅಂತಕಕ್ಕೀಡಾದ ಪಕ್ಕೀರಪ್ಪನು ತನ್ನ ಮೂರು ಮಕ್ಕಳ ಮೇಲೂ ಅದೇ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾನೆ. ಅವರು ರಕ್ತಸಿಕ್ತದಲ್ಲಿ ಪ್ರಜ್ಞಾಹೀನವಾಗಿ ಬಿದ್ದಿರುವುದನ್ನು ಕಂಡು ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಹಲ್ಲೆಯಲ್ಲಿ ಮಗ ಮೃತಪಟ್ಟಿದ್ದಾನೆ. ಪತ್ನಿ, ಇಬ್ಬರು ಪುತ್ರಿಯರ ಸ್ಥಿತಿ ಗಂಭೀರವಾಗಿದೆ.
ಗೌಂಡಿ ಕೆಲಸ ಮಾಡಿಕೊಂಡಿದ್ದ ಫಕ್ಕೀರಪ್ಪನು ಅನಾರೋಗ್ಯದಿಂದ ಬಳಲುತ್ತಿದ್ದ ಹಾಗೂ ಮದ್ಯವ್ಯಸನಿ ಕೂಡ ಆಗಿದ್ದ. ಬುಧವಾರ ಎಲ್ಲರೂ ಮಲಗಿಕೊಂಡಿದ್ದ ವೇಳೆ ಸುತ್ತಿಗೆಯಿಂದ ತಲೆ ಮೇಲೆ ಹಲ್ಲೆ ಮಾಡಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಪುತ್ರ ಶ್ರೇಯಸ್ ಊರ್ಫ್ ಮೈಲಾರಪ್ಪ (6) ಚಿಕಿತ್ಸೆಗೆ ಸ್ಪಂದಿಸಿದೆ ಮೃತಪಟ್ಟರೆ, ಪತ್ನಿ ಮುದಕವ್ವ (30), ಪುತ್ರಿಯರಾದ ಶಾಮಲಾ (8), ಸೃಷ್ಟಿ (4) ಗಂಭೀರವಾಗಿ ಗಾಯಗೊಂಡಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾರೆ. ಕಿಮ್ಸ್ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಸ್ಥಿತಿಯು ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಳ್ಳಗ್ಗೆ 6:00 ಗಂಟೆ ಸುಮಾರಿಗೆ ಮನೆಯ ಅಕ್ಕಪಕ್ಕದವರು ಟಿವಿ ಸೌಂಡ್ ಕೇಳಿ ಬಾಗಿಲು ಬಡಿದಾಗ ಯಾರು ಬಾಗಿಯಲು ತೆರೆಯದಿದ್ದಾಗ ಮುರಿದಿದ್ದಾರೆ. ಆಗ ರಕ್ತದ ಮಡುವಿನಲ್ಲಿ ಮೂವರು ಮಕ್ಕಳು ಹಾಗೂ ಮುದಕವ್ವ ಬಿದ್ದಿದ್ದನ್ನು ನೋಡಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.