Ad imageAd image

ಒಂದೇ ವಿಮಾನದಲ್ಲಿ ಬೆಳಗಾವಿಗೆ ಬಂದಿಳಿದ ಡಿಕೆ ಸುರೇಶ್, ಸತೀಶ್ ಜಾರಕಿಹೊಳಿ: ತಿಳಿಯಾಯ್ತಾ ಸಂಘರ್ಷ?

ratnakar
ಒಂದೇ ವಿಮಾನದಲ್ಲಿ ಬೆಳಗಾವಿಗೆ ಬಂದಿಳಿದ ಡಿಕೆ ಸುರೇಶ್, ಸತೀಶ್ ಜಾರಕಿಹೊಳಿ: ತಿಳಿಯಾಯ್ತಾ ಸಂಘರ್ಷ?
WhatsApp Group Join Now
Telegram Group Join Now

ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಭವನ ಕಟ್ಟಡ ನಿರ್ಮಾಣದ ಕ್ರೆಡಿಟ್‌ಗಾಗಿ ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ನಡುವೆ ನೇರಾ ನೇರ ಫೈಟ್ ಶುರುವಾಗಿತ್ತು. ಇನ್ನೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಕುರಿತು ಕೂಡ ಸತೀಶ್ ಧ್ವನಿ ಎತ್ತಿದ್ದರು. ಆದರೆ ಬೆಂಗಳೂರಿನಿಂದ ಬೆಳಗಾವಿಗೆ ಸತೀಶ್ ಬರುವಷ್ಟರಲ್ಲಿ ಎಲ್ಲವೂ ತಣ್ಣಗಾದಂತೆ ಕಾಣುತ್ತಿದೆ.

ಇದೇ 21 ರಂದು ಬೆಳಗಾವಿಯಲ್ಲಿ ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ್’ ಬೃಹತ್ ಸಮಾವೇಶವನ್ನು ಆಯೋಜಿಸಲಾಗುತ್ತಿದೆ. ಬೆಳಗಾವಿಯಲ್ಲಿಂದು ಇದರ ಪೂರ್ವ ಸಿದ್ಧತೆ ಸಭೆ ಕರೆಯಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಇಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿದ್ದ ಸತೀಶ್‌ಗೆ ಗುರುವಾರವೇ ಬೆಳಗಾವಿಗೆ ಬರುವಂತೆ ಸುರ್ಜೇವಾಲ ಕಚೇರಿಯಿಂದ ಸೂಚನೆ ಹೋಗಿತ್ತು. ಹೀಗಾಗಿ ರಾತ್ರಿಯೇ ಬೆಂಗಳೂರಿನಿಂದ ವಿಮಾನ ಹತ್ತಿದ್ದ ಸತೀಶ್, ಡಿಕೆ ಸುರೇಶ್ ಜತೆಯೇ ಬೆಳಗಾವಿ ಬಂದಿಳಿದರು. ಇಬ್ಬರು ಮಾತನಾಡುತ್ತಾ ನಗುತ್ತಾ ಹೊರಬಂದಿದ್ದು ಗಮನ ಸೆಳೆಯಿತು.

ಬೆಳಗಾವಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸತೀಶ್ ನಂತರ ನೇರವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ತೆರಳಿದರು. ಲಕ್ಷ್ಮೀ ಹೆಬ್ಬಾಳ್ಕರ್ ಆರೋಗ್ಯ ವಿಚಾರಿಸಿ ಧೈರ್ಯ ತುಂಬುವ ಕೆಲಸ ಮಾಡಿದರು. ಇದೆ ವೇಳೆ ಘಟನೆ ಹೇಗಾಯಿತು ಎಂದು ಹೆಬ್ಬಾಳ್ಕರ್ ಸಹೋದರ ಚನ್ನರಾಜ ಹಟ್ಟಿಹೊಳಿಯಿಂದ ಮಾಹಿತಿ ಪಡೆದರು.

ಪಕ್ಷದಲ್ಲಿ ಸ್ಥಾನ ಸಿಗಬೇಕಾದರೆ, ಮಾಧ್ಯಮದಲ್ಲೋ ಅಂಗಡಿಯಲ್ಲೋ ಸಿಗಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷರ ನೇಮಕ ಕುರಿತ ಸತೀಶ್ ಜಾರಕಿಹೊಳಿ ಹೇಳಿಕೆಗೆ ತಿರುಗೇಟು ನೀಡಿದ್ದರು. ಡಿಕೆ ಶಿವಕುಮಾರ್ ಮಾತಿಗೆ ಪ್ರತಿಕ್ರಿಯಿಸಿದ್ದ ಸತೀಶ್ ಜಾರಕಿಹೊಳಿ, ಅವರು ಕೋಪದಲ್ಲಿದ್ದಾಗ ಆ ರೀತಿ ಹೇಳಿಕೆ ನೀಡಿರಬಹುದು. ಎರಡ್ಮೂರು ದಿನ ಬಿಟ್ಟರೆ ಎಲ್ಲ ಸರಿ ಆಗುತ್ತದೆ ಎಂದು ತಿಕ್ಕಾಟಕ್ಕೆ ತೆರೆ ಎಳೆಯುವ ಕೆಲಸ ಮಾಡಿದ್ದರು. ಜತೆಗೆ ಸ್ಥಾನಮಾನವನ್ನು ಸಾಮರ್ಥ್ಯ ನೋಡಿ ಕೊಡುತ್ತಾರೆ, ಜನಪ್ರಿಯತೆ ನೋಡಿ ಕೊಡುತ್ತಾರೆ ಎಂದು ವ್ಯಾಖ್ಯಾನಿಸಿದ್ದರು.

ಸದ್ಯ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್ ಮೂರು ಜನರ ನಡುವೆ ಶುರುವಾಗಿದ್ದ ಫೈಟ್ ಒಂದು ಹಂತದಲ್ಲಿ ತಣ್ಣಗಾಯ್ತಾ ಎಂಬ ಪ್ರಶ್ನೆ ಮೂಡಿದೆ. ಇಂದು ಬೆಳಗಾವಿಗೆ ಬರುತ್ತಿರುವ ರಣದೀಪ್ ಸುರ್ಜೆವಾಲ ಡಿಕೆಶಿ, ಸತೀಶ್ ನಡುವಿನ ಸಮರ ಶಮನಗೊಳಿಸುವ ಸಾಧ್ಯತೆಯಿದೆ. ಸಚಿವೆ ಲಕ್ಷ್ಮೀಹೆಬ್ಬಾಳ್ಕರ್ ಅವರು ಅಪಘಾತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಇಡೀ ಕಾರ್ಯಕ್ರಮದ ಉಸ್ತುವಾರಿ, ಜವಾಬ್ದಾರಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿಯವರ ಹೆಗಲಿಗೇರಿದೆ. ಡಿಕೆ ಶಿವಕುಮಾರ್ ಮಾರ್ಗದರ್ಶನದಲ್ಲಿ ಸತೀಶ್ ಜಾರಕಿಹೊಳಿ ಕೆಲಸ ಮಾಡಬೇಕಿದೆ. ಈ ಸಂದರ್ಭದಲ್ಲಿ ಪರಸ್ಪರ ಚರ್ಚೆಯಾಗಿ ಪರಿಸ್ಥಿತಿ ತಿಳಿಯಾಗಬಹುದು ಎಂದು ಅಂದಾಜಿಸಲಾಗಿದೆ.

WhatsApp Group Join Now
Telegram Group Join Now
Share This Article