ಬೆಂಗಳೂರು: ಇದು ನಕ್ಸಲರ ಶರಣಾಗತಿ ಅಲ್ಲ. ಕಾಡು ನಕ್ಸಲರನ್ನು ನಾಡು ನಕ್ಸಲರನ್ನಾಗಿ ಮಾಡುವ ಪ್ಯಾಕೇಜ್ ಇದು ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಮೇಶ್ವರ ಕಫೆಗೆ ಬಾಂಬ್ ಇಟ್ಟವರನ್ನು ಹಾಗೂ ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಟ್ಟವರನ್ನ ಶರಣಾಗತಿ ಆದರೆ ಬಿಡ್ತಾರಾ? ಶರಣಾಗತಿಗೂ ಮೊದಲೇ ಎ, ಬಿ,ಸಿ ಎಂದು ಪ್ಯಾಕೇಜ್ ಘೋಷಣೆ ಮಾಡುವುದು ಸರಿಯಲ್ಲ. ಸಿದ್ದರಾಮಯ್ಯನವರ ಮನೆಯಲ್ಲೇ ಶರಣಾಗತಿ ಆಗುತ್ತದೆ ಅಂದ್ರೆ ಅದಕ್ಕಿಂತ ದೊಡ್ಡ ದುರಂತ ಯಾವುದು ಇಲ್ಲ ಎಂದು ಹೇಳಿದರು.
ನಕ್ಸಲ್ ಶರಣಾಗತಿ ಮಾಡುವಂತಹ ಘಟನೆ ಅತ್ಯಂತ ಆತಂಕಕಾರಿ. ನಕ್ಸಲ್ ಅವರನ್ನು ಶರಣಾಗತಿ ಮಾಡಿಸುವ ಸಿದ್ದರಾಮಯ್ಯ ಅವರನ್ನು ಪ್ರಶ್ನೆ ಮಾಡಬೇಕು. ಮುಂದಿನ ದಿನಗಳಲ್ಲಿ ನಾಗರಿಕ ಸಮಾಜ ಅತ್ಯಂತ ಅಪಾಯಕಾರಿಗೆ ತಲುಪಲಿದೆ ಎಂದು ಅಭಿಪ್ರಾಯಪಟ್ಟರು.
ನಕ್ಸಲ್ ಚಿಂತನೆಗೆ ಬೆಂಬಲ ಸಿಗದೇ ಇದ್ದಾಗ ಸಿದ್ದರಾಮಯ್ಯ ಸರ್ಕಾರ ಪ್ಯಾಕೇಜ್ ಆಸೆಯ ಚಿಗುರು ಹೊರಡಿಸಿದೆ. ಹಣವನ್ನು ನೀಡಿ ಶರಣಾಗತಿ ಮಾಡಿಸುವುದನ್ನು ನಾವು ವಿರೋಧಿಸುತ್ತೇವೆ. ಬಡವರಿಗೆ ನೆರವು ಕೊಡದೇ ಬಂದೂಕುಗಳು ಹಿಡಿದವರಿಗೆ ನೆರವು ಕೊಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.