Ad imageAd image

ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದ ಸರತಿ ಸಾಲಿನ ನೂತನ ಸಂಕೀರ್ಣ ಉದ್ಘಾಟನೆ

ratnakar
ಶ್ರೀ ಕ್ಷೇತ್ರ ಧರ್ಮಸ್ಥಳ ದೇವಳದ ಸರತಿ ಸಾಲಿನ ನೂತನ ಸಂಕೀರ್ಣ ಉದ್ಘಾಟನೆ
WhatsApp Group Join Now
Telegram Group Join Now

ಧರ್ಮಸ್ಥಳ : ಭಾರತವು ಜಗತ್ತಿನ ಅಧ್ಯಾತ್ಮಿಕ ಕೇಂದ್ರದಂತಿದ್ದು, ಧರ್ಮಸ್ಥಳವು ಅದಕ್ಕೆ ಕೀರ್ತಿ ಕಳಶದಂತಿದೆ.‌ ಲಕ್ಷಾಂತರ ಜನರು ದೇವರನ್ನು ಹರಸಿ ಈ ಸ್ಥಳಕ್ಕೆ ಬರುತ್ತಾರೆ. ಅತ್ಯಾಧುನಿಕ ಸೌಲಭ್ಯದೊಂದಿಗೆ ಧಾರ್ಮಿಕತೆ, ಉತ್ಕೃಷ್ಟತೆ, ಸೌದಾರ್ಯತೆ ಇಲ್ಲಿದೆ‌ ಎಂದು ಉಪ ರಾಷ್ಟ್ರಪತಿ ಜಗದೀಪ್ ಧನ್‌ಕರ್ ಹೇಳಿದರು.

ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ದೇವಳ ಸರತಿ ಸಾಲಿನ ನೂತನ‌‌ ಸಂಕೀರ್ಣ ‘ಶ್ರೀ ಸಾನಿಧ್ಯ’ ಹಾಗೂ 2024-25ನೇ ಸಾಲಿನ ಜ್ಞಾನದೀಪ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಭಾರತದ ಧಾರ್ಮಿಕ ಕ್ಷೇತ್ರಗಳು ವೈಯಕ್ತಿಕ ನಂಬಿಕೆಗೂ ಮೀರಿದ್ದಾಗಿವೆ. ಅವುಗಳು ಸಮುದಾಯ ಸೇವೆಯ ಕೇಂದ್ರಗಳಾಗಿವೆ. ಅದರಲ್ಲೂ ಶಿಕ್ಷಣ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಧರ್ಮಸ್ಥಳದ ಕೊಡುಗೆ ಅಪಾರವಾಗಿದೆ. ಭಾರತವು ಗ್ರಾಮೀಣ ದೇಶವಾಗಿದ್ದು, ಅದರ ಅಭಿವೃದ್ಧಿ ಮೂಲಕ ದೇಶದ ಅರ್ಥಿಕತೆ ನಿರ್ಧಾರವಾಗುತ್ತದೆ. ರಾಜ್ಯದ ಗ್ರಾಮೀಣ ಭಾಗದಲ್ಲಿ ಅಭಿವೃದ್ಧಿಯ ಕೆಲಸವನ್ನು ಶ್ರೀ ಕ್ಷೇತ್ರ ಮಾಡುತ್ತಿದೆ ಎಂದು ಅಭಿಪ್ರಾಯಪಟ್ಟರು.


ಭಾರತವು ಸಂಸ್ಕೃತಿಯ ನಾಡಾಗಿದ್ದು, ಜಗತ್ತಿನ ಆರನೇ ಒಂದು ಭಾಗ ಜನಸಂಖ್ಯೆ ಇಲ್ಲಿದೆ.‌ ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದೆ. 2047ಕ್ಕೆ ಭಾರತವನ್ನು ಅಭಿವೃದ್ಧಿಯಾದ ದೇಶವಾಗಿಸುವುದಷ್ಟೇ ನಮ್ಮ ಗುರಿ ಅಲ್ಲ, ಅದು ಉದ್ದೇಶವಾಗಿರಬೇಕು. ‌ವೈಯಕ್ತಿಕವಾಗಿ ದೇಶಕ್ಕೆ ಕೊಡುಗೆ ನೀಡುವ ಮೂಲಕ ಇದನ್ನು ಸಾಧ್ಯವಾಗಿಸಬಹುದು ಎಂದರು.

ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಸ್ವಾಗತ ಹಾಗೂ ಪ್ರಾಸ್ತಾವಿಕ ಮಾತುಗಳನ್ನಾಡಿದರು. `ಭಕ್ತಾದಿ ದೇವೋಭವ’ ಎನ್ನುವ ತತ್ವದಲ್ಲಿ ಬೇರೂರಿರುವ ಸಂಕೀರ್ಣದ ಮೂಲ ಅಡಿಪಾಯವನ್ನು ಒತ್ತಿಹೇಳಿದರು. ಭಕ್ತರಿಗೆ ದೇವರ ದರ್ಶನದ ವೇಳೆ ಆರಾಮದಾಯಕ ಮತ್ತು ಉತ್ತಮ ವಾತಾವರಣವನ್ನು ಒದಗಿಸುವ ಮೂಲಕ, ನೂತನ ಸಂಕೀರ್ಣದೊಳಗಿನ ವಿವಿಧ ಸೌಲಭ್ಯಗಳು ಪ್ರತಿಯೊಬ್ಬ ಭಕ್ತನಿಗೆ ದೈವಿಕ ಹಾಗೂ ಆಧ್ಯಾತ್ಮಿಕ ವಾತಾವರಣ ಅನುಭವನ್ನು ಹೊಂದಲು ಸಹಕಾರಿಯಾಗಿದೆ ಎಂದರು.


ಅತ್ಯಾಧುನಿಕ ತಂತ್ರಜ್ಞಾನದಿಂದ ಕೂಡಿರುವ ನೂತನ ಸರತಿ ಸಾಲು ವ್ಯವಸ್ಥೆವೊಂದಿರುವ ‘ಶ್ರೀ ಸಾನಿಧ್ಯ’ ಸಂಕೀರ್ಣವು 2,75,177 ಚದರ ಅಡಿಯಲ್ಲಿ ಮೂರು ಮಹಡಿಗಳ ಬೃಹತ್ ಕಟ್ಟಡವಾಗಿದ್ದು, 16 ನಿರೀಕ್ಷಣಾ ಹಾಲ್‌ಗಳಿವೆ. ಮಕ್ಕಳ ಕಾಳಜಿ ಕೊಠಡಿ, ತುಲಾಬಾರದ ನಿರೀಕ್ಷಣಾ ಕೊಠಡಿ, ಪುಡ್ ಕೌಂಟರ್, ವ್ಯವಸ್ಥಿತ ಶೌಚಾಲಯ, ಗಣ್ಯರ ನಿರೀಕ್ಷಣಾ ಕೊಠಡಿಗಳನ್ನು ಹೊಂದಿದೆ. ಎಐ ಸಿಸಿ ಟಿವಿ, ಹವಾ ನಿಯಂತ್ರಿತ ಸೌಲಭ್ಯ, ತುರ್ತು ವೈದ್ಯಕೀಯ ಸೌಲಭ್ಯ, ಶುದ್ಧ ಕುಡಿಯುವ ನೀರು, ದೂರದರ್ಶನ ವ್ಯವಸ್ಥೆ, ಅಗ್ನಿ ಶಾಮಕ ಸೌಲಭ್ಯ, ತುರ್ತು ಸಂದರ್ಭಗಳಲ್ಲಿ ಲಿಫ್ಟ್ ಸೌಲಭ್ಯ, ಸೋಲಾರ್ ವಿದ್ಯುತ್ ಬಳಕೆಯಿದೆ. ಶ್ರೀ ಸಾನಿಧ್ಯದಲ್ಲಿ ಒಂದೇ ಬಾರಿಗೆ ಸುಮಾರು ಹತ್ತು ಸಾವಿರ ಜನರಿಗೆ ದರ್ಶನ ಸೌಲಭ್ಯ ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರಿಂದ ಭಕ್ತರು ಸ್ವಾಮಿಯ ದರ್ಶನ ಪಡೆಯುವ ಅವಧಿಯನ್ನು ಕಡಿಮೆಗೊಳಿಸುತ್ತದೆ.‌
ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಗುಣಮಟ್ಟವನ್ನು ಉತ್ತಮಗೊಳಿಸುವ ಉದ್ದೇಶದಿಂದ ಜ್ಞಾನ ದೀಪ ಯೋಜನೆಯನ್ನು ಜಾರಿಗೊಳಿಸಲಾಗಿದ್ದು,‌ 2024 – 25 ಸಾಲಿನ ಜ್ಞಾನದೀಪ ಯೋಜನೆಯನ್ನು ಜಗದೀಪ್ ಧನ್‌ಕರ್ ಅವರು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಶುಭಾರಂಭಗೊಳಿಸಿದರು.
ಕಾರ್ಯಕ್ರಮದಲ್ಲಿ ಉಪ ರಾಷ್ಟ್ರಪತಿ ಜಗದೀಪ್ ದನ್‌ಕರ್ ಪತ್ನಿ ಸುದೇಶ್ ಧನ್ಕರ್, ಡಾ.ಹೇಮಾವತಿ ವಿ. ಹೆಗ್ಗಡೆ, ಲೋಕಸಭಾ ಸದಸ್ಯ ಬ್ರಿಜೇಶ್ ಚೌಟ, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ. ಸುರೇಂದ್ರ ಕುಮಾರ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ‌ ಕಾರ್ಯದರ್ಶಿ ಡಿ. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಎಸ್‌ಡಿಎಂ ಕಾಲೇಜಿನ ಪ್ರಾಧ್ಯಾಪಕ ಡಾ.‌ ಶ್ರೀಧರ ಭಟ್ ನಿರೂಪಿಸಿದರು.

WhatsApp Group Join Now
Telegram Group Join Now
Share This Article