ಬೆಂಗಳೂರು: ಎಷ್ಟೇ ಚಿರಾಡಲಿ, ಬಟ್ಟೆ ಹರಿದುಕೊಳ್ಳಲಿ ನಾನು ರಾಜೀನಾಮೆ ನೀಡುವುದಿಲ್ಲ ಎಂದು ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಚಿನ್ ಪಂಚಾಳ್ (Sachin Panchal) ಆತ್ಮಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುವಂತೆ ಗೃಹ ಸಚಿವರಿಗೆ ನಾನು ಪತ್ರ ಬರೆದಿದ್ದೆ. ಸಿಎಂ ಮತ್ತು ಗೃಹ ಸಚಿವರನ್ನು ಭೇಟಿಯಾಗಿ ಮಾಹಿತಿ ನೀಡಿ ಮನವಿ ಮಾಡಿದ್ದೆ. ಇದರಂತೆ ಈಗ ಗೃಹ ಸಚಿವರು ಸಿಐಡಿ (CID) ತನಿಖೆಗೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ಅವರಿಗೆ ಸಿಬಿಐ (CBI) ಮೇಲೆ ಪ್ರೀತಿ ಜಾಸ್ತಿ. ಹೀಗಾಗಿ ಸಿಬಿಐ ತನಿಖೆಗೆ ಕೇಳುತ್ತಾರೆ. ವರ್ಷಗಳ ಹಿಂದೆ ಬಿಜೆಪಿ ಕೈಯಲ್ಲಿ ಎಲ್ಲಾ ಸಂಸ್ಥೆಗಳು ಇತ್ತು ಏನ್ ಮಾಡಿದರು? ಬಿಜೆಪಿ ಯಾರದ್ದೋ ತಲೆ ದಂಡ ಆಗುತ್ತೆ ಅಂತ ಕಾಯ್ತಾ ಇದ್ದಾರೆ. ಯಾವುದೇ ಕಾರಣಕ್ಕೂ ಯಾರ ತಲೆ ತಂಡ ಆಗುವುದಿಲ್ಲ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.
ಕಲಬುರಗಿಗೆ (Kalaburagi) ಮುತ್ತಿಗೆ ಹಾಕೋ ಎಚ್ಚರಿಕೆ ಕೊಟ್ಟಿರುವ ಬಿಜೆಪಿ ನಾಯಕರಿಗೆ ತಿರುಗೇಟು ಕೊಟ್ಟ ಸಚಿವರು,ಕಲಬುರಗಿಗೆ ಮುತ್ತಿಗೆ ಹಾಕಲಿ ಯಾರು ಬೇಡ ಎಂದಿದ್ದಾರೆ. ನನ್ನ ವಿರುದ್ದ ಏನಾದರೂ ದಾಖಲಾತಿ ಇದ್ದರೆ ತಂದು ಕೊಡಿ. ನಿಮಗೆ ನಾಚಿಕೆ ಆಗಬೇಕು. ಯಾಕೆ ಕಲಬುರಗಿಗೆ ಮುತ್ತಿಗೆ ಹಾಕ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರನ್ನು ಮಾಧ್ಯಮಗಳು ಯಾಕೆ ಅಷ್ಟು ಸಿರಿಯಸ್ ಆಗಿ ತೆಗೆದುಕೊಂಡಿದ್ದೀರಿ? ಹೈಕಮಾಂಡ್ ನಾಯಕರೇ ರಾಜ್ಯ ಬಿಜೆಪಿ ನಾಯಕರನ್ನ ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಯಡಿಯೂರಪ್ಪ ಫೋಕ್ಸೋ ಪ್ರಕರಣಕ್ಕೆ ನೋಟಿಸ್ ಕೊಟ್ರಾ? ಮುನಿರತ್ನ ಕೇಸ್ ನಲ್ಲಿ ಹೈಕಮಾಂಡ್ ನಾಯಕರು ಏನ್ ಕ್ರಮ ತೆಗೆದುಕೊಂಡಿದ್ದಾರೆ? ಯತ್ನಾಳ್ ವಿರುದ್ದ ಏನ್ ಕ್ರಮ ಆಯ್ತು? ರೇಣುಕಾಚಾರ್ಯ ವಿರುದ್ದ ಏನ್ ಕ್ರಮ ಆಗಿದೆ. ರಾಜ್ಯದ ನಾಯಕರಿಗೆ ಹೈಕಮಾಂಡ್ ಕವಡೆ ಕಾಸಿನ ಕಿಮ್ಮತ್ತು ಕೊಡುವುದಿಲ್ಲ ಎಂದು ರಾಜ್ಯ ಬಿಜೆಪಿ ನಾಯಕರನ್ನು ಲೇವಡಿ ಮಾಡಿದರು.