ಬೆಳಗಾವಿ: ಸರ್ಕಾರಿ ನೀರಾವರಿ ಯೋಜನೆಗೆ ಬಳಸಿದ ಬರೊಬ್ಬರಿ 70 ಲಕ್ಷ ರೂ. ವಿದ್ಯುತ್ ಬಿಲ್ ಕಟ್ಟುವಂತೆ ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ನೀಡಿದ್ದ ನೋಟಿಸ್ ಅನ್ನು ಸರ್ಕಾರ ವಾಪಸ್ ಪಡೆದಿದೆ.
ಕರೆಂಟ್ ಬಿಲ್ ಕಟ್ಟುವಂತೆ ಕೆಐಎಡಿಬಿ ಸಿದ್ದಗಂಗಾ ಮಠಕ್ಕೆ ನೋಟಿಸ್ ನೀಡಿದ್ದ ಕುರಿತು ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ಇದು ಏಪ್ರಿಲ್ನಲ್ಲಿ ಕೊಟ್ಟ ನೋಟಿಸ್. ಕೆಐಡಿಬಿಯ ಒಂದು ಕೆರೆ ಇದೆ. ಆ ಕೆರೆಯಿಂದ ನೀರು ತೆಗೆದುಕೊಂಡಿದ್ದಾರೆ. ನೀರು ಬಳಸಿದ್ದರೂ ಅದು ತಪ್ಪಲ್ಲ. ನೀರೇ ಬಳಸದೆ ನೋಟಿಸ್ ಕೊಟ್ಟಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
ಕೆರೆಯಿಂದ ನೀರು ಬಳಕೆ ಮಾಡಿರುವುದಕ್ಕೆ ಈ ನೋಟಿಸ್ ಕೊಡಲಾಗಿದೆ. ಆದರೆ ಅದನ್ನು ವಾಪಸ್ ಪಡೆದುಕೊಳ್ಳುತ್ತೇವೆ. ಸಿದ್ದಗಂಗಾ ಮಠ ವಿಶ್ವಕ್ಕೆ ಮಾದರಿಯಾದ ಮಠವಾಗಿದೆ. ಮಕ್ಕಳಿಗೆ ಶಿಕ್ಷಣ, ದಾಸೋಹ ಕೊಡುತ್ತಿರುವ ಮಠವಾಗಿದೆ. ಈ ಬಗ್ಗೆ ಮುಖ್ಯ ಎಂಜಿನಿಯರ್ ಸ್ವಾಮೀಜಿ ಜೊತೆ ಮಾತನಾಡಿದ್ದಾರೆ. ಸಿದ್ದಗಂಗಾ ಮಠ ನೀರನ್ನು ಬಳಸಿಕೊಂಡರೂ ತಪ್ಪಲ್ಲ. ಈ ಕುರಿತಾಗಿ ಸ್ವಾಮೀಜಿ ಜೊತೆಗೆ ಮಾತನಾಡುತ್ತೇನೆ ಎಂದರು.
ಒಂದು ವೇಳೆ ನೀರು ಬಳಸದೇ ನೋಟಿಸ್ ಕೊಟ್ಟರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮುಂದೆಯೂ ಮಠ ನೀರನ್ನು ಬಳಸಬಹುದು. ಸಿಎಸ್ಆರ್ ಲೆಕ್ಕದಲ್ಲಿ ನಾವು ಉಚಿತವಾಗಿಯೇ ನೀರು ಕೊಡುತ್ತೇವೆ. ಮಠ ಯಾವಾಗ ಬೇಕಾದರೂ ನೀರನ್ನು ಬಳಸಿಕೊಳ್ಳಬಹುದು. ಈಗ ಬಳಸಿಕೊಂಡಿದ್ದರೂ ತಪ್ಪಲ್ಲ, ಮುಂದೆಯು ಬಳಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ.