ಬೆಳಗಾವಿ: ಬಾಣಂತಿಯರ ಸಾವು ಕರ್ನಾಟಕವನ್ನೇ ಬೆಚ್ಚಿ ಬೀಳಿಸುವಂತಹ ಘಟನೆಯಾಗಿದೆ. ಇನ್ಮುಂದೆ ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗದೇ ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.
ವಿಧಾನಸಭೆ ಸದನದಲ್ಲಿ ಬಾಣಂತಿಯರ ಸಾವು, ಮೆಡಿಕಲ್ ಮಾಫಿಯಾ ವಿಚಾರವಾಗಿ ಚರ್ಚೆ ನಡೆಯಿತು. ನಿಯಮ 69 ಅಡಿಯಲ್ಲಿ ನಡೆದ ಚರ್ಚೆಯಲ್ಲಿ ವಿಪಕ್ಷ ನಾಯಕ ಆರ್. ಅಶೋಕ್ ಮಾತನಾಡಿದರು.
ಬಾಣಂತಿಯರ ಸಾವು ಪ್ರಕರಣ ಕರ್ನಾಟಕವನ್ನೇ ಬೆಚ್ಚಿ ಬೀಳಿಸುವ ಘಟನೆಯಾಗಿದೆ. ಬಳ್ಳಾರಿ ಮಾತ್ರವಲ್ಲ ರಾಯಚೂರು, ಬೆಳಗಾವಿ, ಚಿತ್ರದುರ್ಗದಲ್ಲೂ ಬಾಣಂತಿಯರ ಸಾವಾಗಿದೆ. ಆರೋಗ್ಯ ಇಲಾಖೆ ರೋಗ ಪೀಡಿತ ಇಲಾಖೆ ಆಗಿದೆ. ಘಟನೆ ಆದ 6 ದಿನದ ಬಳಿಕ ಸಚಿವರು ಜಿಲ್ಲೆಗೆ ಹೋಗಿದ್ದಾರೆ. ವೈದ್ಯರು ತಪ್ಪು ಒಪ್ಪಿಕೊಳ್ಳುತ್ತಿಲ್ಲ, ಡ್ರಗ್ ಕಂಟ್ರೋಲರ್ನನ್ನು ಬಲಿಪಶು ಮಾಡಲಾಗಿದೆ ಎಂದು ದೂರಿದರಲ್ಲದೇ ಒಂದೆಡೆ ರಾಜ್ಯದಲ್ಲಿ ನಕಲಿ ವೈದ್ಯರ ಹಾವಳಿ ಜೋರಾಗಿದೆ. ಆರೋಗ್ಯ ಇಲಾಖೆ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ವಯನಾಡ್ನಲ್ಲಿ ಆನೆ ತುಳಿತ ಪ್ರಕರಣಕ್ಕೆ 15 ಲಕ್ಷ ಪರಿಹಾರವನ್ನು ರಾಜ್ಯ ಸರ್ಕಾರ ನೀಡಿದ್ದರು. ಆದರೆ ಬಾಣಂತಿಯರ ಸಾವಿಗೆ 2 ಲಕ್ಷ ಪರಿಹಾರ ಕೊಡಲಾಗಿದೆ ಎಂದು ಆರೋಪಿಸಿದರು.
ಮೃತಪಟ್ಟ ಮಹಿಳೆಯರನ್ನು (ಬಾಣಂತಿಯರು) ನೋಡಿದರೆ ನೋವಾಗುತ್ತೆ. ಸರ್ಕಾರಿ ಆಸ್ಪತ್ರೆಗೆ ಹೋಗಬಾರದವ್ವ ಅಂತ ಮಹಿಳೆಯರು ಮಾತಾಡ್ಕೊಳ್ತಿದ್ದಾರೆ. 50% ಮಹಿಳೆಯರು ಸರ್ಕಾರಿ ಆಸ್ಪತ್ರೆಗೆ ಹೋಗ್ತಿಲ್ಲ, ಖಾಸಗಿ ಆಸ್ಪತ್ರೆಗೆ ಹೋಗ್ತಿದ್ದಾರೆ ಎಂದರು. ಈ ವೇಳೆ ಅಶೋಕ್ ಮಾತಿಗೆ ಶಾಸಕ ಕೋನರೆಡ್ಡಿ ಆಕ್ಷೇಪ ವ್ಯಕ್ತಪಡಿಸಿದರು. ವಿಪಕ್ಷ ನಾಯಕರಾಗಿ ಸರ್ಕಾರಿ ಆಸ್ಪತ್ರೆಗೆ ಹೋಗಬೇಡಿ ಅಂತ ಸಂದೇಶ ಕೊಡ್ತಿದ್ದೀರಾ? ಜನರಿಗೆ ಏನು ಸಂದೇಶ ಹೋಗುತ್ತೆ? ಒಳ್ಳೆಯ ಸಲಹೆ ಕೊಡಿ. ಸರ್ಕಾರ ಆಸ್ಪತ್ರೆಗಳ ಪರಿಸ್ಥಿತಿ ಉತ್ತಮಗೊಳಿಸಿದೆ, ಸರಿಯಾಗಿ ಮಾತಾಡಿ. ಸರ್ಕಾರಿ ಆಸ್ಪತ್ರೆ, ವೈದ್ಯರ ಮೇಲೆ ಕೆಟ್ಟ ಭಾವನೆ ಬರುವಂತೆ ಮಾತನಾಡಬೇಡಿ ಎಂದರು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಏರ್ಪಟ್ಟಿತು.