ಬಾಗಲಕೋಟೆ: ಯುಕೆಪಿ (ಕೃಷ್ಣಾ ಮೇಲ್ದಂಡೆ ಯೋಜನೆ) ಅನುಷ್ಠಾನಕ್ಕೆ ಆಗ್ರಹಿಸಿ ಸಂತ್ರಸ್ತರು ನಡೆಸುತ್ತಿರುವ ಹೋರಾಟ 13ನೇ ದಿನಕ್ಕೆ ಕಾಲಿಟ್ಟಿದ್ದು, ಈ ಕುರಿತು ಡಿ.16ರಂದು ಬೆಳಗಾವಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ.
ನವನಗರದ ಜಿಲ್ಲಾಡಳಿತ ಭವನದ ಎದುರು ಯುಕೆಪಿ ಯೋಜನೆ ಪೂರ್ಣಗೊಳಿಸಬೇಕು, ಏಕಕಾಲಕ್ಕೆ ಭೂಸ್ವಾಧೀನ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಂತ್ರಸ್ತರು ಅನಿರ್ದಿಷ್ಠಾವಧಿ ಧರಣಿ ನಡೆಸುತ್ತಿದ್ದು, ಅವರ ಬೇಡಿಕೆ ಈಡೇರುವ ನಿಟ್ಟಿನಲ್ಲಿ ಡಿ.16ರ ಸಿಎಂ ನೇತೃತ್ವದ ಸಭೆ ಮಹತ್ವ ಪಡೆದುಕೊಂಡಿದೆ. ಸಭೆಯಲ್ಲಿ ಯೋಜನೆ ಕುರಿತು ಸಮಗ್ರ ಚರ್ಚೆ ನಡೆಯಲಿದ್ದು, ಸಂತ್ರಸ್ತರು ಪರಿಹಾರ ಕಂಡುಕೊಳ್ಳುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಯೋಜನೆ ಶೀಘ್ರ ಪೂರ್ಣಗೊಳಿಸಲು ಸಭೆಯಲ್ಲಿ ಗ್ರೀನ್ ಸಿಗ್ನಲ್ ಸಿಕ್ಕರೆ ಈ ಭಾಗದ ರೈತರಿಗೆ ಅನುಕೂಲವಾಗಲಿದೆ. ಜೊತೆಗೆ ಸಂತ್ರಸ್ತರಿಗೆ ಪರಿಹಾರ ಒದಗಿಸಿದಲ್ಲಿ ಬಹುದಿನದ ಹೋರಾಟಕ್ಕೆ ತಾರ್ಕಿಕ ಅಂತ್ಯ ಸಿಗಲಿದೆ.
ಹಲವು ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸ್ಥಳಕ್ಕೆ ಭಾನುವಾರ ನಗರದ ಡಿಸ್ಟ್ರಿಬ್ಯೂಟರ್ ಅಸೋಸಿಯೇಶನ್, ರೆಡಿಮೇಟ್ ಬಟ್ಟೆ ವರ್ತಕರ ಸಂಘ, ಕಿರಾಣಿ ವರ್ತಕರ ಸಂಘ, ಬಾಂಡೆ ಅಸೋಷಿಯೇಶನ್, ಕಪ್ಪಡ, ಸರಾಫ್ ಹಾಗೂ ಸುವರ್ಣಕಾರರ ಸಂಘ, ಕಸಾಪ, ಕಲಾವಿದರ ಸಂಘದ ಪದಾಧಿಕಾರಿಗಳು ಎಪಿಎಂಸಿ ವೃತ್ತದಿಂದ ಮೆರವಣಿಗೆ ಮೂಲಕ ಆಗಮಿಸಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು.