Ad imageAd image

ಬಳ್ಳಾರಿ ಬಾಣಂತಿಯರ ಸಾವು: ನ್ಯಾಯಾಂಗ ತನಿಖೆಗೆ ವಿಜಯೇಂದ್ರ ಆಗ್ರಹ

ratnakar
ಬಳ್ಳಾರಿ ಬಾಣಂತಿಯರ ಸಾವು: ನ್ಯಾಯಾಂಗ ತನಿಖೆಗೆ ವಿಜಯೇಂದ್ರ ಆಗ್ರಹ
WhatsApp Group Join Now
Telegram Group Join Now

ಬೆಂಗಳೂರು: ಬಳ್ಳಾರಿ ಬಾಣಂತಿಯರ ಸಾವು ಪ್ರಕರಣದಲ್ಲಿ ಸರ್ಕಾರದ ನಿರ್ಲಕ್ಷ್ಯ ಎದ್ದು ತೋರುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದುವರೆಗೆ ಆರೋಗ್ಯ ಸಚಿವರಾಗಲಿ, ವೈದ್ಯಕೀಯ ಶಿಕ್ಷಣ ಸಚಿವರಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಾಗಲಿ ಘಟನಾ ಸ್ಥಳಕ್ಕೆ ಹೋಗದಿರುವುದು ಖಂಡನೀಯ ಎಂದರು.

ಬ್ಲಾಕ್ ಲಿಸ್ಟ್ ಆಗಿರುವ ಕಂಪನಿಯಿಂದ ಔಷಧ ತಗೆದುಕೊಳ್ಳಲಾಗಿದೆ. ಸರ್ಕಾರ ಈ ವಿಚಾರದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕು. ಮೃತರ ಕುಟುಂಬಕ್ಕೆ ಸರ್ಕಾರ ಪರಿಹಾರ ಕೊಡಬೇಕು ಘಟನೆ ಹಿನ್ನೆಲೆಯಲ್ಲಿ ಲೋಕಾಯುಕ್ತಕ್ಕೆ ನಮ್ಮವರು ದೂರು ನೀಡುತ್ತಿದ್ದಾರೆ ಎಂದು ವಿಜಯೇಂದ್ರ ತಿಳಿಸಿದರು.

ಜನರು ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಇವರು ಜನಕಲ್ಯಾಣ ಹೆಸರಲ್ಲಿ ಸಮಾವೇಶ ಮಾಡಿಕೊಂಡು ಕುಳಿತಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಾನು ಪ್ರವಾಸ ಮಾಡಿಕೊಂಡು ಬಂದಿದ್ದೇನೆ. ರೈತರ ಬೆಳೆಗಳು ಸಂಕಷ್ಟದಲ್ಲಿವೆ, ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಸರ್ಕಾರ ಇದರ ಸಮೀಕ್ಷೆ ಮಾಡುವುದು ಬಿಟ್ಟು ಸಮಾವೇಶಗಳಲ್ಲಿ ವ್ಯಸ್ತವಾಗಿದೆ ಎಂದು ವಿಜಯೇಂದ್ರ ವಾಗ್ದಾಳಿ ನಡೆಸಿದರು.

ನಾಯಕತ್ವದ ಬಗ್ಗೆ ಶಾಸಕ ರಮೇಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ವಿಜಯೇಂದ್ರ, ನನಗೆ ಮಾಡಲು ಬಹಳಷ್ಟು ಕೆಲಸಗಳಿವೆ. ದಿನ ಬೆಳಗಾದರೆ ಯತ್ನಾಳ್ ಹಾಗೂ ಇತರರ ಬಗ್ಗೆ ಮಾತಾಡಲು ನಾನು ಸಿದ್ಧನಿಲ್ಲ. ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. ಹೋರಾಟ ಮಾಡಲು ಹಲವು ವಿಚಾರಗಳಿವೆ ಎಂದರು.

ಬೆಳಗಾವಿ ಅಧಿವೇಶನದಲ್ಲಿ ಬಳ್ಳಾರಿ ಬಾಣಂತಿಯರ ಸಾವಿನ ಪ್ರಕರಣ, ರೈತರ ಬೆಳೆ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಬೇಕಿದೆ. ನಾನು ಅದರತ್ತ ಮಾತ್ರ ಗಮನ ಹರಿಸುತ್ತೇನೆ ಎಂದರು.

ಏತನ್ಮಧ್ಯೆ, ಬಿಜೆಪಿ ಕೋರ್ ಕಮಿಟಿ ಸಭೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಚರ್ಚಿಸಬೇಕಾದ ವಿಚಾರಗಳ ಬಗ್ಗೆ ಮಾತುಕತೆ ನಡೆಯುತ್ತಿದೆ. ಬಸನಗೌಡ ಪಾಟೀಲ್ ಯತ್ನಾಳ್ ಕರೆಸಿ, ನಾವೆಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ. ಎಲ್ಲಾ ಒಟ್ಟಾಗಿ ಅಧಿವೇಶನ ಎದುರಿಸಬೇಕಿದೆ. ನಾವೆಲ್ಲರೂ ಒಟ್ಟಾಗಿ ಹೋಗಬೇಕು ಎಂಬುದು ನನ್ನ ಅಪೇಕ್ಷೆ. ರಾಜ್ಯದಲ್ಲಿ ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ಸಲಹೆ ಕೊಡುತ್ತೇನೆ. ನಾಳೆ ಎಲ್ಲಾ ಸಮಸ್ಯೆ ಬಗೆಹರಿಯಲಿದೆ. ಒಗ್ಗಟ್ಟಾಗಿ ಅಧಿವೇಶನ ಎದುರಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.

WhatsApp Group Join Now
Telegram Group Join Now
Share This Article