ಬೆಂಗಳೂರು: ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣದಲ್ಲಿ ನನ್ನ ತಪ್ಪಿದ್ದರೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಬಾಣಂತಿಯರ ಸರಣಿ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದ ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಿಜೆಪಿಯವರು (BJP) ಲೋಕಾಯುಕ್ತಕ್ಕೆ ಖಂಡಿತ ದೂರು ಕೊಡಲಿ. ಇದರಲ್ಲಿ ವಿಪಕ್ಷದವರ ಸಹಕಾರವೂ ಬೇಕು. ಈ ಪ್ರಕರಣದಲ್ಲಿ ನನ್ನ ತಪ್ಪಿದ್ರೆ ನಾನು ರಾಜೀನಾಮೆ ಕೊಡಲೂ ಸಿದ್ಧನಾಗಿದ್ದೇನೆ. ಇದರಲ್ಲಿ ನನ್ನ ಪ್ರತಿಷ್ಠೆ ಏನಿಲ್ಲ. ಇದು ಜೀವದ ವಿಚಾರ. ನನ್ನ ರಾಜೀನಾಮೆಯಿಂದ ಸರಿಯಾಗುತ್ತೆ ಅಂದರೆ ರಾಜೀನಾಮೆಗೂ ಸಿದ್ಧ. ಆದರೆ ಈ ಪ್ರಕರಣದಲ್ಲಿ ಸರ್ಕಾರ ಗಂಭೀರವಾಗಿದೆ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಕ್ರಮ ತೆಗೆದುಕೊಳ್ಳಲೇಬೇಕು. ಇಲ್ಲಿಯವರೆಗೆ ಈ ವರ್ಷ ರಾಜ್ಯದಲ್ಲಿ 327 ಮೆಟರ್ನಲ್ ಸಾವಾಗಿದೆ. ಎಲ್ಲವನ್ನೂ ಪರಿಶೀಲಿಸಿ ಅಂತ ಹೇಳಿದ್ದೇವೆ. ಇಂತಹ ಪ್ರಕರಣಗಳಲ್ಲಿ ಸಹನೆ ಇರಬಾರದು, ಕಠಿಣ ಕಾನೂನು ಕ್ರಮ ಆಗಬೇಕು ಎಂದು ತಿಳಿಸಿದರು.
ಮೊನ್ನೆ ಬಳ್ಳಾರಿಯಲ್ಲಿ 9 ಜನರಿಗೆ ಸಮಸ್ಯೆ ಆಗಿತ್ತು, ನಾಲ್ವರು ಸಾವನ್ನಪ್ಪಿದ್ದರು. ಐದನೇಯವರು ಚಿಕಿತ್ಸೆ ಪಡಿಯುತ್ತಿದ್ದರು. ಈಗ ಅವರೂ ತೀರಿಕೊಂಡಿದ್ದಾರೆ. ಅವರಿಗೆ ಅದೇ ಬ್ಯಾಚ್ನ ರಿಂಗರ್ ಲ್ಯಾಕ್ಟೇಟ್ ದ್ರಾವಣ ಕೊಡಲಾಗಿತ್ತು. ಈಗಾಗಲೇ ಕಂಪನಿ ವಿರುದ್ಧ ಕ್ರಮಕ್ಕೆ ಮುಂದಾಗಿದ್ದೇವೆ. ಆದರೆ ಇವರಿಗೆ ಬೇರೆ ಆರೋಗ್ಯ ಸಮಸ್ಯೆಯೂ ಇತ್ತು. ಅವರು ಗುಣಮುಖರಾಗುತ್ತಾರೆ ಎಂದು ವೈದ್ಯರು ಹೇಳಿದ್ದರು. ಆದರೆ ನಿನ್ನೆ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿತ್ತು ಎಂದು ತಿಳಿಸಿದ್ದಾರೆ ಎಂದರು.