ತುಮಕೂರು: 2028ರ ಸಾರ್ವತ್ರಿಕ ಚುನಾವಣೆ ವಿಜಯೇಂದ್ರರ ನೇತೃತ್ವದಲ್ಲಿ ನಡೆಯಲಿದ್ದು, 140 ಸ್ಥಾನ ಗೆದ್ದು ಅಧಿಕಾರ ಹಿಡಿಯುತ್ತೇವೆ ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಯಡಿಯೂರಪ್ಪರ ಕುಟುಂಬದ ಮೇಲೆ ದುಷ್ಟ ಶಕ್ತಿಯ ದೃಷ್ಟಿ ಬೀಳಬಾರದು ಎಂದು ತುಮಕೂರು (Tumakuru) ಜಿಲ್ಲೆ ಕುಣಿಗಲ್ ತಾಲೂಕಿನ ಎಡೆಯೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಇತ್ತಿಚಿಗೆ ಯಡಿಯೂರಪ್ಪ ಹಾಗೂ ವಿಜಯೇಂದ್ರರ ಮೇಲೆ ದುಷ್ಟ ಶಕ್ತಿಗಳ ಕಣ್ಣು ಬೀಳುತ್ತಿದೆ. ಹಾಗಾಗಿ ಸಿದ್ಧಲಿಂಗೇಶ್ವರ ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.
ಯಡಿಯೂರಪ್ಪನವರು 45 ವರ್ಷ ಇರುವಾಗ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ್ದರು. ಆದರೆ ವಿಜಯೇಂದ್ರರ 49ನೇ ವರ್ಷದಲ್ಲಿ ಅಧ್ಯಕ್ಷರಾಗಿದ್ದಾರೆ. ಯಾವ ಅರ್ಥದಲ್ಲಿ ಅವರು ಕಿರಿಯರಾಗುತ್ತಾರೆ? ಸೋಮವಾರ ನಡೆದ ಸಭೆಯಲ್ಲಿ 21 ಜಿಲ್ಲಾಧ್ಯಕ್ಷರು ವಿಜಯೇಂದ್ರಗೆ ಬೆಂಬಲ ಕೊಟ್ಟಿದ್ದಾರೆ. ಆದರೆ ಸ್ವಯಂ ಘೋಷಿತ ನಾಯಕರಿಂದ ಉಪಚುನಾವಣೆ ಸೋತಿದೆ ಎಂದು ಯತ್ನಾಳ್‌ಗೆ ಟಾಂಗ್ ಕೊಟ್ಟರು.
ಕೇಂದ್ರದಿಂದ ಬಂದಿರೋದು ಫೇಕ್ ನೋಟೀಸ್ ಎನ್ನುವ ಯತ್ನಾಳ್, ಯಡಿಯೂರಪ್ಪನವರು ಕಣ್ಣೀರು ಹಾಕಿದ್ದನ್ನು ಮಿಮಿಕ್ರಿ ಮಾಡಿ ಅವಹೇಳನ ಮಾಡೋದು ಸರಿನಾ? ಕುಮಾರ ಬಂಗಾರಪ್ಪನವರಿಗೆ ರಾಜಕೀಯ ಪುನರ್‌ಜನ್ಮ ಕೊಟ್ಟಿದ್ದು ಯಡಿಯೂರಪ್ಪನವರು. ಆದರೂ ಮೊನ್ನೆ ಮೊನ್ನೆ ಬಂದವರು ವಿಜಯೇಂದ್ರಗೆ ನೀತಿ ಪಾಠ ಹೇಳೋದು ತಪ್ಪು ಎಂದರು.
ರಮೇಶ್ ಜಾರಕಿಹೊಳಿ ಬಲಿಪಶು ಆಗಬೇಡಿ ಎಂದು ಮನವಿ ಮಾಡಿದ್ದಾರೆ. ಡಿಸೆಂಬರ್ 10ರಂದು ದಾವಣಗೆರೆ ಸಮಾವೇಶ ನಡೆಯಲಿದ್ದು, ಈ ಸಮಾವೇಶದಲ್ಲಿ ಮಾಜಿ ಶಾಸಕರುಗಳು, ಮಾಜಿ ಸಚಿವರು, ಕೇಂದ್ರ ಸಚಿವರು, ವಿಪಕ್ಷ ನಾಯಕ ಆರ್ ಅಶೋಕ್ ಇರುತ್ತಾರೆ ಎಂದು ತಿಳಿಸಿದರು.