ಮುಂಬೈ: ಮಹಾರಾಷ್ಟ್ರ ಚುನಾವಣಾ ಫಲಿತಾಂಶ ಒಂದು ದಿನ ಬಾಕಿ ಇದ್ದು ರೆಸಾರ್ಟ್ ಪಾಲಿಟಿಕ್ಸ್ ಪ್ರಾರಂಭವಾಗುವ ಸಾಧ್ಯತೆಯಿದೆ.
ಚುನಾವಣೋತ್ತರ ಸಮೀಕ್ಷೆಗಳು ಮಹಾರಾಷ್ಟ್ರದಲ್ಲಿ ಮಹಾಯುತಿ ಸರ್ಕಾರ ಮತ್ತೆ ಅಧಿಕಾರಕ್ಕೆ ಏರಲಿದೆ ಎಂದು ಭವಿಷ್ಯ ನುಡಿದರೂ ಈ ಬಾರಿ ಎರಡು ಒಕ್ಕೂಟಗಳ ಮಧ್ಯೆ ನೇರಾನೇರ ಸ್ಪರ್ಧೆ ಇದೆ ಎಂದು ಮಹಾ ವಿಕಾಸ ಅಘಾಡಿ ಮೈತ್ರಿಗೆ ಗೊತ್ತಾಗಿದೆ.
ಪಕ್ಷಗಳ ಆಂತರಿಕ ಸಮೀಕ್ಷೆಯಲ್ಲಿ ಈ ವಿಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ (ಕಾಂಗ್ರೆಸ್) ಗೆಲುವು ಸಾಧಿಸಿದ ಶಾಸಕರನ್ನು ಕರ್ನಾಟಕಕ್ಕೆ (ಕರ್ನಾಟಕ) ಕಳುಹಿಸಲು ಮುಂದಾಗಿದೆ.
ಮೂರು ಚಾರ್ಟರ್ಡ್ ವಿಮಾನಗಳು ಸಿದ್ಧವಾಗುವಂತೆ ಸೂಚಿಸಲಾಗಿದೆ. ಎನ್‌ಸಿಪಿ ನಾಯಕ ಶರದ್ ಪವಾರ್ ಮತ್ತು ಶಿವಸೇನಾ ನಾಯಕ ಉದ್ಧವ್ ಠಾಕ್ರೆ ನಿರ್ಧಾರಕ್ಕೆ ಕಾಂಗ್ರೆಸ್ ಈಗ ಕಾಯುತ್ತಿದೆ. ಒಂದು ವೇಳೆ ಇಬ್ಬರೂ ನಾಯಕರು ಅನುಮತಿ ನೀಡಿದರೆ ಮೂರು ಪಕ್ಷದ ಗೆದ್ದ ಶಾಸಕರು ಕರ್ನಾಟಕಕ್ಕೆ ಬರುವ ಸಾಧ್ಯತೆಯಿದೆ.
ಈ ಬಾರಿ ಅಧಿಕಾರಕ್ಕೆ ಏರಲೇಬೇಕೆಂದು ಅಘಾಡಿ ಮೈತ್ರಿ ಪಣ ತೊಟ್ಟಿದೆ. ಒಂದು ವೇಳೆ ಮಹಾಯುತಿಗೆ ಬಹುಮತ ಸಿಗದೇ ಇದ್ದರೆ ನಮ್ಮ ಶಾಸಕರನ್ನು ಸೆಳೆಯಬಹುದು ಎಂಬ ಭೀತಿ ಎದುರಾಗಿದೆ. ಈ ಕಾರಣಕ್ಕೆ ಈಗಲೇ ಶಾಸಕರನ್ನು ಹಿಡಿದಿಡಲು ಶಾಸಕರನ್ನು ಕರ್ನಾಟಕಕ್ಕೆ ಕಳುಹಿಸುವ ಸಂಬಂಧ ಮಾತುಕತೆ ನಡೆಸುತ್ತಿದೆ ಎಂದು ವರದಿಯಾಗಿದೆ.