ದಾವಣಗೆರೆ: ಮ್ಯಾಟ್ರಿಮೋನಿಯಲ್ಲಿ (Matrimony) ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ 62.83 ಲಕ್ಷ ರೂ. ಹಣ ಪಡೆದು ವಂಚಿಸಿದ (Fraud Case) ಆರೋಪಿಯನ್ನು ದಾವಣಗೆರೆಯ (Davanagere) ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಂಡ್ಯ ತಾಲ್ಲೂಕಿನ ಮಾಚಹಳ್ಳಿಯ ಎಂ.ಮಧು ಅಲಿಯಾಸ್ ಮಾದು (31) ಎಂದು ಗುರುತಿಸಲಾಗಿದೆ. ಆರೋಪಿ ಮ್ಯಾಟ್ರಿಮೋನಿಯಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ಭರವಸೆ ಕೊಡುತ್ತಿದ್ದ. ಅಲ್ಲದೇ ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಅವರಿಂದ ಹಣ ಪಡೆಯುತ್ತಿದ್ದ. ಹೀಗೆ ಹಲವಾರು ಯುವತಿಯರಿಗೆ ಆರೋಪಿ ವಂಚಿಸಿದ್ದ.
ದಾವಣಗೆರೆ ನಗರದ ಯುವತಿಯೊಬ್ಬಳನ್ನು ಅರೋಪಿ ಪರಿಚಯಿಸಿಕೊಂಡು, ವಿವಾಹವಾಗುವುದಾಗಿ ನಂಬಿಸಿದ್ದ. ಆಕೆಗೆ ಮೈಸೂರಿನಲ್ಲಿ ರೈಲ್ವೆ ಇಲಾಖೆಯ ವರ್ಕ್‍ಶಾಪ್‍ನಲ್ಲಿ ಉದ್ಯೋಗ ಕೊಡಿಸುವುದಾಗಿ ಹಂತ ಹಂತವಾಗಿ 21 ಲಕ್ಷ ರೂ. ಹಣ ಪಡೆದು ವಂಚಿಸಿದ್ದ. ಯುವತಿಗೆ ವಂಚನೆಗೊಳಗಾಗಿದ್ದು ಅರಿವಾಗುತ್ತಿದ್ದಂತೆ ಆಕೆ ದೂರು ದಾಖಲಿಸಿದ್ದಳು.
ಆರೋಪಿ ಮಧು ವಿರುದ್ಧ ಮಂಡ್ಯ, ದಾವಣಗೆರೆ, ಹರಿಹರ, ಬೆಂಗಳೂರು ಕಾಟನ್ ಪೇಟೆ, ಮೈಸೂರು, ಕೆ ಆರ್ ನಗರ, ಚಿಕ್ಕಮಗಳೂರು ಪೊಲೀಸ್ ಠಾಣೆಗಳಲ್ಲಿ ಕೂಡ ವಂಚನೆ ಪ್ರಕರಣ ದಾಖಲಾಗಿದೆ. ಇದುವರೆಗೂ ಆರೋಪಿ ಹಲವು ಯುವತಿಯರಿಗೆ 62.83 ಲಕ್ಷ ರೂ. ವಂಚಿಸಿದ್ದಾನೆ ಎಂದು ತನಿಖೆ ವೇಳೆ ತಿಳಿದುಬಂದಿದೆ.