ಬೆಂಗಳೂರು: ವಕ್ಫ್ (waqf Row) ವಿರುದ್ಧದ ಹೋರಾಟದ ವಿಚಾರದಲ್ಲಿ ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y vijayendra) ಯಾವ ನಿರ್ಧಾರ ಮಾಡ್ತಾರೋ ಅದಕ್ಕೆ ನಾವು ಬದ್ಧರಾಗಿ ಇರುತ್ತೇವೆ ಎಂದು ಮಾಜಿ ಸಚಿವ ರೇಣುಕಾಚಾರ್ಯ (M.P Renukacharya) ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಟೀಂನಿಂದ ನಡೆಯುತ್ತಿರುವ ವಕ್ಫ್ ಜನ ಜಾಗೃತಿ ಅಭಿಯಾನದ ವಿಚಾರಕ್ಕೆ ಅವರು ಪ್ರತಿಕ್ರಿಯಿಸಿದರು. ಅಧಿಕೃತವಾಗಿ ರಾಜ್ಯಾಧ್ಯಕ್ಷರು ಏನು ತೀರ್ಮಾನ ತೆಗೆದುಕೊಳ್ತಾರೆ ಅದಕ್ಕೆ ನಾವು ಬದ್ಧವಾಗಿರಬೇಕು. ಬಿಜೆಪಿ ಶಿಸ್ತಿನ ಪಕ್ಷ, ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಜಿಲ್ಲಾ ಹಾಗೂ ತಾಲೂಕಿನ ಮಟ್ಟದಲ್ಲಿ ಪ್ರತಿಭಟನೆ ಆಗಿದೆ. ಅವರು ಅಧಿಕೃತವಾಗಿ ಪ್ರವಾಸ ಮಾಡಲಿದ್ದಾರೆ, ಅವರ ಹೊರತುಪಡಿಸಿದರೆ ಪಕ್ಷದ ಹೆಸರಲ್ಲಿ ಬೇರೆಯವರು ಪ್ರವಾಸ ಮಾಡಲು ಅವಕಾಶ ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈಗ ನಾನು ಟೀಮ್ ತೆಗೆದುಕೊಂಡು ಹೋದರೆ ಹೈಕಮಾಂಡ್ ಅವಕಾಶ ಕೊಡುತ್ತಾ? ಯಾವುದೇ ಕಾರಣಕ್ಕೆ ಹೈಕಮಾಂಡ್ ಅನುಮತಿ ನೀಡಲ್ಲ. ರಾಜ್ಯಾಧ್ಯಕ್ಷರ ತೀರ್ಮಾನವೇ ಅಂತಿಮ. ರಾಜ್ಯಾಧ್ಯಕ್ಷರು ಹೋರಾಟ ಪ್ರಾರಂಭ ಮಾಡಿದ ಮೇಲೆ ಸರ್ಕಾರ ವಕ್ಫ್ ನೋಟಿಸ್ ವಾಪಸ್ ಪಡೆದಿದೆ. ಯಾವುದೇ ತಂಡಕ್ಕೂ ಅಭಿಯಾನ ಮಾಡಲು ನೈತಿಕ ಹಕ್ಕಿಲ್ಲ ಎಂದು ಅವರು ಹೇಳಿದ್ದಾರೆ.