ಬೆಂಗಳೂರು: ರಾಜ್ಯದಲ್ಲಿ ವಕ್ಫ್ ವಿವಾದ ದೊಡ್ಡದಾಗುತ್ತಿರೋ ಬೆನ್ನಲ್ಲೇ ಬಿಜೆಪಿಯ (BJP) ರೆಬಲ್ಸ್ ಟೀಂ ವಕ್ಫ್ ವಿಚಾರವಾಗಿ ರಾಜ್ಯಾದ್ಯಂತ ಜನ ಜಾಗೃತಿ ಅಭಿಯಾನ ಮಾಡೋದಾಗಿ ಘೋಷಣೆ ಮಾಡಿದೆ.
ಬಿಜೆಪಿಯ ರೆಬೆಲ್ಸ್ ನಾಯಕರುಗಳಾದ ಯತ್ನಾಳ್, ಅರವಿಂದ್ ಲಿಂಬಾವಳಿ, ಕುಮಾರ್ ಬಂಗಾರಪ್ಪ, ರಮೇಶ್ ಜಾರಕಿಹೋಳಿ (Ramesh Jarakiholi) ಇಂದು ಸುದ್ದಿಗೋಷ್ಠಿ ನಡೆಸಿ ವಕ್ಫ್ ವಿರುದ್ಧ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಪ್ರಾರಂಭ ಮಾಡೋದಾಗಿ ಘೋಷಣೆ ಮಾಡಿದ್ರು. ನ.25 ರಿಂದ ಡಿ.25ವರೆಗೆ ಒಂದು ತಿಂಗಳ ಕಾಲ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತಾನಾಡಿದ ಮಾಜಿ ಸಚಿವ ಅರವಿಂದ್ ಲಿಂಬಾವಳಿ, ರಾಜ್ಯಾದ್ಯಂತ ಅಭಿಯಾನ ಶುರು ಮಾಡ್ತಿದ್ದೇವೆ. ಇದಕ್ಕಾಗಿ ಒಂದು ವಾರ್ ರೂಂ ಪ್ರಾರಂಭ ಮಾಡ್ತಿದ್ದು, ಯಾರಿಗೆ ಅನ್ಯಾಯ ಆಗಿದೆಯೋ ಅವರು ವಾರ್ ರೂಂಗೆ ದಾಖಲಾತಿ ನೀಡಬಹುದು. ನ.25 ರಿಂದ ಬಸನಗೌಡ ಯತ್ನಾಳ್ ನೇತೃತ್ವದಲ್ಲಿ ಅಭಿಯಾನ ಶುರುವಾಗಲಿದೆ. ಬೀದರ್ನಿಂದ (Bidar) ಅಭಿಯಾನ ಪ್ರಾರಂಭ ಆಗಲಿದ್ದು, ಬಳಿಕ ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ನಿತ್ಯವೂ ಅಭಿಯಾನ ಮಾಡೋದಾಗಿ ತಿಳಿಸಿದರು. ನಮ್ಮದು ಮೂರು ಬೇಡಿಕೆ ಇದೆ ಅವುಗಳೆಂದರೆ, 1954ರಿಂದ ಆಗಿರೋ ವಕ್ಫ್ನ ಎಲ್ಲಾ ಗೆಜೆಟ್ಗಳನ್ನ ರದ್ದು ಮಾಡಬೇಕು. ರೈತರು, ಮಠಗಳು, ಮಂದಿರ, ದಲಿತರು ಸೇರಿ ಜಾಗ ಅಂತ ವಕ್ಫ್ ಮಾಡ್ತಿದೆ ಅದನ್ನ ಕಾಯಂ ಆಗಿ ಜಮೀನು ವಾಪಸ್ ಕೊಡಬೇಕು. ಅನ್ವರ್ ಮಾಣಿಪ್ಪಾಡಿ ವರದಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.