ಮೈಸೂರು: ನಮ್ಮ ಸರ್ಕಾರ ಬೀಳಿಸಲು ಬಿಜೆಪಿ (BJP) ನಮ್ಮ 50 ಶಾಸಕರಿಗೆ ಒಬ್ಬೊಬ್ಬರಿಗೆ 50 ಕೋಟಿ ರೂ. ಅನ್ನು ಆಫರ್ ಮಾಡಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬಾಂಬ್ ಸಿಡಿಸಿದ್ದಾರೆ.
ಮೈಸೂರಿನ (Mysuru) ಟಿ.ನರಸೀಪುರ ತಾಲೂಕಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನನ್ನನ್ನ ಮುಟ್ಟಿದ್ರೆ ನಮ್ಮ ಕರ್ನಾಟಕದ ಜನ ಸುಮ್ಮನೆ ಬಿಡಲ್ಲ ಎಂದು ವಿಪಕ್ಷಗಳಿಗೆ ಖಡಕ್ ಎಚ್ಚರಿಕೆ ಕೊಟ್ಟಿದ್ದಾರೆ.
ಎಲ್ಲಾ ವಿರೋಧ ಪಕ್ಷಗಳ ನಾಯಕರ ಸಿಎಂಗಳನ್ನ ಹೆದರಿಸುವ ಕೆಲಸವನ್ನು ಕೇಂದ್ರ ಸರಕಾರ ಮಾಡ್ತಿದೆ. ಇಡಿ, ಐಡಿ, ಸಿಬಿಐ (ED, IT, SBI) ಎಲ್ಲಾ ಅವರ ಕೈಯಲ್ಲಿದೆ. ಅವುಗಳನ್ನು ನಮ್ಮ ಮೇಲೆ ಛೂ ಬಿಡುವ ಕೆಲಸ ಮಾಡ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಮೇಲೆ ಇರುವ ಕೇಸ್‌ಗಳು ಸುಳ್ಳು. ನಾನು 40 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಮಂತ್ರಿ, ಉಪ ಮುಖ್ಯಮಂತ್ರಿ, ವಿರೋಧ ಪಕ್ಷ ನಾಯಕ, ಸಿಎಂ ಎಲ್ಲವೂ ಆಗಿದ್ದೇನೆ. ಸಿದ್ದರಾಮಯ್ಯ 14 ಸೈಟ್‌ಗೆ ರಾಜಕಾರಣ ಮಾಡಬೇಕಿತ್ತಾ? ಜನರು ಮೂರ್ಖರು ಅಂತ ಬಿಜೆಪಿ ತಿಳಿದುಕೊಂಡಿದೆ. ಜನರ ಬೆಂಬಲ ಇರುವವರೆಗೆ ನಾನು ಯಾವ ಕೇಸ್‌ಗೂ ಜಗ್ಗಲ್ಲ ಬಗ್ಗಲ್ಲ ಎಂದು ಗುಡುಕಿದ್ದಾರೆ.
ಜಾರ್ಖಂಡ್‌ಬಲ್ಲಿ ಹೇಮಂತ್ ಸೊರೇನ್, ದೆಹಲಿಯಲ್ಲಿ ಕೇಜ್ರಿವಾಲ್ ಆಯ್ತು ಈಗ ನನ್ನ ಮೇಲೆ ಕೇಸ್ ಹಾಕಿಸುವುದು ಶುರುವಾಗಿದೆ. ನಮ್ಮ ಸರ್ಕಾರ ಬೀಳಿಸಲು ಬಿಜೆಪಿ ನಮ್ಮ 50 ಶಾಸಕರಿಗೆ ಒಬ್ಬೊಬ್ಬರಿಗೆ 50 ಕೋಟಿ ರೂ. ಅನ್ನು ಆಫರ್ ಮಾಡಿದ್ದರು. ಇದು ಯಶಸ್ವಿ ಆಗಲಿಲ್ಲ. ಇಷ್ಟು ಹಣ ಬಿಜೆಪಿಗೆ ಎಲ್ಲಿಂದ ಬಂತು? ಯಡಿಯೂರಪ್ಪ, ಬೊಮ್ಮಾಯಿ, ಅಶೋಕ್, ವಿಜಯೇಂದ್ರ ಹಣ ಪ್ರಿಂಟ್ ಮಾಡುತ್ತಾರಾ? ಇದು ಭ್ರಷ್ಟಾಚಾರದ ಹಣ ಅಲ್ವಾ? ಹೀಗಾಗಿ ನನ್ನ ಮೇಲೆ ಕೇಸ್ ಹಾಕಿಸಿ ಸರ್ಕಾರ ಬೀಳಿಸುವ ಯತ್ನ ಮಾಡ್ತಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ