ಬೆಂಗಳೂರು: ಅಬಕಾರಿ ಇಲಾಖೆಯಲ್ಲಿ (Department of Excise) ಭ್ರಷ್ಟಾಚಾರ, ಲಂಚ ಸ್ವೀಕಾರ ಮಿತಿ ಮೀರಿದೆ. ಇದನ್ನು ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮದ್ಯ ಮಾರಾಟಗಾರರ ಒಕ್ಕೂಟ (Karnataka Wine Merchants’ Association) ನ.20ರಂದು ಮದ್ಯ ಬಂದ್ಗೆ ಕರೆ ಕೊಟ್ಟಿದೆ. ಜೊತೆಗೆ ಮಾಜಿ ಸಚಿವ ಗೋಪಾಲಯ್ಯ, ಮಾಜಿ ಸಚಿವ ನಾಗೇಶ್ ಅಬಕಾರಿ ಸಚಿವರಾಗಿದ್ದಾಗಲೂ ಲಂಚ ಇತ್ತು. ಈಗ ಮಿತಿ ಮೀರಿದೆ ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆರೋಪಿಸಿದೆ.
ಅಬಕಾರಿ ಇಲಾಖೆಯಲ್ಲಿ ಕೋಟಿ ಕೋಟಿ ಲಂಚ ಸ್ವೀಕಾರ ಎಂದು ದೊಡ್ಡ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಬಿಜೆಪಿ ಮತ್ತು ಕೇಂದ್ರ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಮುಗಿ ಬೀಳುತ್ತಿದ್ದಾರೆ. ಈಗ ಮದ್ಯ ಮಾರಾಟಗಾರರ ಸಂಘ ಭ್ರಷ್ಟಾಚಾರ ಖಂಡಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನವೆಂಬರ್ 20ರಂದು ಮದ್ಯ ಮಾರಾಟ ಬಂದ್ ಮಾಡಲು ನಿರ್ಧರಿಸಿದ್ದಾರೆ.
ಇನ್ನೂ ಈ ಲಂಚ ಸ್ವೀಕಾರ ಎಲ್ಲಾ ಸರ್ಕಾರದಲ್ಲೂ ಇದೆ. ಗೋಪಾಲಯ್ಯ ಅವರು ಸಚಿವರಾಗಿದ್ದಾಗಲೂ ಇತ್ತು. ನಾಗೇಶ್ ಸಚಿವರಾಗಿದ್ದಾಗಲೂ ಇತ್ತು. ಈಗ ಕಾಂಗ್ರೆಸ್ ಸರ್ಕಾರದಲ್ಲಿ ಮಿತಿ ಮೀರಿದೆ. ಹಾಗಾಗಿ ನ್ಯಾಯ ಬೇಕಿದೆ. ಅಬಕಾರಿ ಸಚಿವರನ್ನ ಬದಲಾವಣೆ ಮಾಡಬೇಕು. ಮುಖ್ಯ ಮಂತ್ರಿಗಳ ನೇತೃತ್ವದಲ್ಲಿ ಸಭೆ ಮಾಡಬೇಕು. ಹಣಕಾಸು ಇಲಾಖೆಗೆ ನಮ್ಮ ಇಲಾಖೆಯನ್ನ ಸೇರಿಸಬೇಕು ಎಂದು ಮದ್ಯ ಮಾರಾಟಗಾರರ ಒಕ್ಕೂಟ ಆಗ್ರಹಿಸಿದೆ.